For the best experience, open
https://m.justkannada.in
on your mobile browser.

ದಸರಾ ಗಜಪಯಣಕ್ಕೆ ಚಾಲನೆ: ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮನ

02:52 PM Aug 21, 2024 IST | prashanth
ದಸರಾ ಗಜಪಯಣಕ್ಕೆ ಚಾಲನೆ  ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮನ

ಮೈಸೂರು ಆಗಸ್ಟ್ , 21,2024 (www.justkannada.in) : ಇಂದು ಮೊದಲ ಹಂತದಲ್ಲಿ 9 ದಸರಾ  ಆನೆಗಳು ಮೈಸೂರಿಗೆ ಆಗಮಿಸುತ್ತಿದ್ದು, ಗಜ ಪಯಣಕ್ಕೆ ವಿರನಹೊಸಹಳ್ಳಿ ಬಳಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಅಧಿಕೃತ ಚಾಲನೆ ನೀಡಿದರು.

ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಿದರು. ಹಾಡಿ ಜನರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವೀರಗಾಸೆ ನೃತ್ಯ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಂತರ ಮಾತನಾಡಿದ ಸಚಿವ ಹೆಚ್.  ಸಿ ಮಹದೇವಪ್ಪ ಅವರು,ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ ಕಂಜನ್, ಏಕಲವ್ಯ, ಭೀಮ, ಲಕ್ಷ್ಮೀ, ವರಲಕ್ಷ್ಮಿ, ರೋಹಿತ್, ಧನಂಜಯ ಹಾಗೂ ಗೋಪಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಮೈಸೂರಿನ ಅಶೋಕಪುರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿ, ಅಗಸ್ಟ್ 23 ರಂದು ಅರಮನೆಗೆ ಸ್ವಾಗತ ಮಾಡಿ ಆನೆಗಳನ್ನು ಬರಮಾಡಿಕೊಳ್ಳಲಾಗುವುದು ಎಂದರು.

ಆನೆ ಎಂಬುದು ಒಂದು ದೊಡ್ಡ ಸಂದೇಶ ನೀಡುತ್ತದೆ. ಆನೆ ಎಂಬುದು ಕಾಡಿನ ಸಂಪತ್ತು. ವನ್ಯ ಜೀವಿಗಳು ಹಾಗೂ ವನ್ಯ ಸಂರಕ್ಷಣೆ ದೇಶಕ್ಕೆ ಅತ್ಯಗತ್ಯ. ಪರಿಸರ ಸಂರಕ್ಷಣೆ ಹಾಗೂ ವನ್ಯ ಸಂರಕ್ಷಣೆ ಮಾಡದಿದ್ದರೆ ಮಾನವ ಉಳಿಯುವುದು ಕಷ್ಟ. ಈ ವರ್ಷ ಮೈಸೂರಿನಲ್ಲಿ 40 ಡಿಗ್ರಿವರೆಗೆ ಉಷ್ಣಾಂಶ ಇತ್ತು. ಇದಕ್ಕೆ ಕಾರಣ ಪರಿಸರವನ್ನು ಹಾಳು ಮಾಡುತ್ತಿರುವುದು. ಆದ್ದರಿಂದ ಪರಿಸರವನ್ನು ರಕ್ಷಿಸಲು ಎಲ್ಲರೂ ಪಣತೊಡಬೇಕು ಎಂದು ತಿಳಿಸಿದರು.

ಅರ್ಜುನ ಆನೆ 14 ಬಾರಿ ದಸರಾದಲ್ಲಿ ಭಾಗವಹಿಸಿ, 9 ಬಾರಿ ಅಂಬಾರಿ ಹೊತ್ತಿತ್ತು. ಇದು ವೀರ ಮರಣ ಹೊಂದಿತು. ಮಾನವ ಹಾಗೂ ಪ್ರಾಣಿ ಸಂಘರ್ಷ ನಡೆಯಲು ಕಾರಣ ಅರಣ್ಯ ನಾಶ ಮತ್ತು ಒತ್ತುವರಿ ಮಾಡುತ್ತಿರುವುದು ಇದನ್ನು ತಡೆಗಟ್ಟಬೇಕು ಎಂದರು.

ಈ ಬಾರಿ ನಾಡಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತಿಳಿಸಿದ್ದಾರೆ. ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು

ಅರಣ್ಯ ಇಲಾಖೆಯ ಸಚಿವ  ಈಶ್ವರ ಖಂಡ್ರೆ ಅವರು ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಇಂದು ಗಜ ಪಯಣಕ್ಕೆ ಚಾಲನೆ ನೀಡಲಾಗಿದೆ. ಅರ್ಜುನ ಆನೆ ಪುಂಡನೆಯೊಂದಿದೆ ಹೋರಾಡಿ ವೀರ ಮರಣ ಹೊಂದಿತು. ಇದಕ್ಕೆ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

2024 ರ ದಸರಾ ಮಹೋತ್ಸವದಲ್ಲಿ ಒಟ್ಟು 14 ಆನೆಗಳು ಭಾಗವಹಿಸುತ್ತವೆ. ಇಂದು 9 ಆನೆಗಳಿಗೆ ಚಾಲನೆ ನೀಡಲಾಗಿದೆ. 2 ನೆಯ ಹಂತದಲ್ಲಿ 5 ಆನೆಗಳು ಆಗಮಿಸಲಿವೆ.  ಮೈಸೂರಿನ ಅಂದಿನ ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್ ಅವರು ಹೆ ಚ್. ಡಿ ಕೋಟೆಯ ಮಾಸ್ತಿ ಗುಡಿ ಬಳಿ ಆನೆಗಳಿಗೆ ಪೂಜೆ ಮಾಡಿ ಚಾಲನೆ ನೀಡಲಾಗುತ್ತಿತ್ತು. ಈಗ ವೀರನ ಹೊಸಹಳ್ಳಿ ಬಳಿ ಚಾಲನೆ ನೀಡಲಾಗುತ್ತಿದೆ. ಅನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.

ಜಗತ್ತಿನ ಅತಿ ದೊಡ್ಡ ಸವಾಲು ಹವಾಮಾನ ಬದಲಾವಣೆ. ಹವಾಮಾನ ವೈಪರಿತ್ಯ ತಡೆಗಟ್ಟಲು ಅರಣ್ಯ ಸಂರಕ್ಷಣೆ ಮಾಡಬೇಕು. ಕೇರಳದ ವಯನಾಡು ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಅಪಾರ ಪ್ರಮಾಣದ ಸಾವು ನೋವು ಆಸ್ತಿ ಪಾಸ್ತಿ ಹಾನಿ ಆಗಿದೆ ಎಂದರು.

ಅರಣ್ಯ ಸಂರಕ್ಷಣೆ ಕಾಯ್ದೆ ಇರುವುದರಿಂದ ಇಂದು ಕಾಡನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಮಾನವ ಮತ್ತು ಪ್ರಾಣಿ ಸಂಘರ್ಷಣೆ ನಡೆಯುತ್ತಿದೆ. ಪ್ರತಿ ವರ್ಷ 20 ರಿಂದ 30 ಜನ ಆನೆ ತುಳಿತದಿಂದ ಮರಣ ಹೊಂದುತ್ತಿದ್ದಾರೆ.  ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ. ವೆಂಕಟೇಶ್ ಅವರು ಮಾತನಾಡಿ ವಿಶ್ವ ವಿಖ್ಯಾತ ಹೊಂದಿರುವ ಮೈಸೂರು ದಸರಾ ಆಚರಣೆಗೆ ಅನೆಗಳ ಪೂಜೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಲಾಗಿದೆ. ನಾಡ ಹಬ್ಬ ದಸರಾ ಆಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುತ್ತಾರೆ. ಎಲ್ಲಾ ಸಹಕಾರವನ್ನು ನಮ್ಮ ಸರ್ಕಾರ ನೀಡುತ್ತದೆ ಎಂದು ತಿಳಿಸಿದರು.

ಅರಣ್ಯ ವಸತಿ ಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾತನಾಡಿ,  ದಸರಾಕ್ಕೆ ಮೆರಗು ಇರುವುದು ಅಂಬಾರಿ ಹೊರುವುದು. ಅರ್ಜುನ ಆನೆ 9 ಬಾರಿ ಅಂಬಾರಿ ಹೊತ್ತಿತ್ತು. ಇದು ವೀರ ಮರಣ ಹೊಂದಿದ್ದು ಇದರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಮನವಿ ಮಾಡಿದ್ದೇನೆ. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದು ಇದು ನಮಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ ಹರೀಶ್ ಗೌಡ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ  ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಸುನಿಲ್ ಬೋಸ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಕೆ. ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ರವಿಶಂಕರ್, ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಅರಣ್ಯ ವಸತಿ ಧಾಮಗಳ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ದೊಡ್ಡ ಹೆಜ್ಜುರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಂಬಿಕಾ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words: Dasara, Gajapayana, Gajapade, Mysore

Tags :

.