HomeBreaking NewsLatest NewsPoliticsSportsCrimeCinema

ನನ್ನ ಮತ್ತು ನಿರಂಜನಾನಂದಪುರಿ ಶ್ರೀಗಳ ಮಾತು ಕೇಳದೆ ಸ್ಪರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ- ಸಿ.ಎಂ ಸಿದ್ದರಾಮಯ್ಯ ಕರೆ

05:19 PM May 04, 2024 IST | prashanth

ದಾವಣಗೆರೆ ಮೇ 4,2024 (www.justkannada.in):  ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಇಲ್ಲಿ ನಡೆದ ಕುರುಬ ಸಮುದಾಯದ ಮತ್ತು ಹಿಂದುಳಿದ ಸಮಾಜಗಳ ಸಭೆಯಲ್ಲಿ  ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಮಗೆ ನಾನು ಬೇಕೋ-ವಿನಯ್ ಬೇಕೋ ತೀರ್ಮಾನ ಮಾಡಿ. ನಾನು ಬೇಕು ಅಂದ್ರೆ ವಿನಯ್ ಗೆ ಒಂದೂ ಓಟು ಹಾಕಬೇಡಿ. ಬಿಜೆಪಿ ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ. ಇಂಥಾ ಬಿಜೆಪಿಗೆ ವಿನಯ್ ಸಪೋರ್ಟ್ ಆಗುವಂತೆ ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಮೋಸ ಮಾಡಿ ಹೋಗಿದ್ದ ಬೈರತಿ ಬಸವರಾಜು ಬಿಜೆಪಿಗೆ ಲಾಭ ಆಗಲಿ ಎಂದು ವಿನಯ್ ಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಬಿಜೆಪಿ ಹಿಂದುಳಿದವರನ್ನು ಬಳಸಿಕೊಂಡು ಬಿಸಾಡುತ್ತದೆ. ಇದಕ್ಕೆ ಕೆ.ಎಸ್.ಈಶ್ವರಪ್ಪ ಕೂಡ ಸ್ಪಷ್ಟ ಉದಾಹರಣೆ. ನನ್ನ ವಿರುದ್ಧ ರಕ್ತ ಕಾರುತ್ತಿದ್ದ ಈಶ್ವರಪ್ಪ ಅವರ ಮಗನಿಗೂ ಬಿಜೆಪಿ ಟಿಕೆಟ್ ಕೊಡಲಿಲ್ಲ. ಇದೇ ಬಿಜೆಪಿಯ ಜಾಯಮಾನ ಎಂದರು.

ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲ. ಇಲ್ಲಿ ನಾನೇ ಅಭ್ಯರ್ಥಿ. ಕಾಂಗ್ರೆಸ್ ಗೆ ಹಾಕುವ ಒಂದೊಂದು ಮತಗಳೂ ನನಗೇ ಹಾಕಿದಂತೆ. ವಿನಯ್ ಗೆ ಹಾಕುವ ಒಂದೊಂದು ಮತವೂ ನನ್ನ ವಿರುದ್ಧ ಹಾಕಿದಂತೆ ಎಂದು ಸೂಚಿಸಿದರು.

ಅನುಕೂಲ ಮಾಡ್ತೀನಿ ಎಂದು ಹೇಳಿದರೂ ನನಗೆ ಉಲ್ಟಾ ಹೊಡೆದ

ಕನಕಗುರುಪೀಠದ ಶ್ರೀಗಳ ಜತೆಗೆ ವಿನಯ್ ನನ್ನ ಮನೆಗೆ ಬಂದಿದ್ದ. ನಾನು ಮತ್ತು ಶ್ರೀಗಳು ವಿನಯ್ ಗೆ ಸಾಕಷ್ಟು ಹೇಳಿದೆವು. "ನಿನ್ನ ಮನೆ ಹಾಳು ಮಾಡ್ತಾರೆ, ಯಾರದ್ದೋ ಮಾತು ಕೇಳಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಡ. ನಿನಗೆ ಮುಂದೆ ಅನುಕೂಲ ಮಾಡ್ತೀನಿ" ಎಂದು ಹೇಳಿದ್ದೆ. ನಮ್ಮ‌ ಮತ್ತು ಸ್ವಾಮೀಜಿಗಳ ಎದುರಿಗೆ ಆಯ್ತು ಎಂದು ಒಪ್ಪಿಕೊಂಡು ಹೋದ ವಿನಯ್ ಆಮೇಲೆ ಉಲ್ಟಾ ಹೊಡೆದಿದ್ದಾರೆ. ಇದು ತಪ್ಪಲ್ವಾ? ಎಂದರು.

ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬಂದು ಆರು ತಿಂಗಳಾಗಿತ್ತು. ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಮಾಜಿ ಸಚಿವರು, ಶಾಸಕರು, ಜಿಲ್ಲಾ ಮುಖಂಡರು ಒಟ್ಟಾಗಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡಲು ಹೇಳಿದ್ದಾರೆ. ಹೀಗಾಗಿ ವಿನಯ್ ಗೆ ಮುಂದೆ ಅನುಕೂಲ ಆಗ್ತದೆ ಎಂದು ಹೇಳಿದ್ದೆ ಎಂದು ವಿವರಿಸಿದರು.

ಪ್ರಭಾ ಅವರು ಗೆದ್ದರೆ ನಾನು ಗೆದ್ದಂಗೆ

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ. ಆದ್ದರಿಂದ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅತ್ಯಂತ ಬಹುಮತದಿಂದ ಗೆಲ್ಲಿಸಿಕೊಂಡು ಬನ್ನಿ ಎಂದು ಕರೆ ನೀಡಿದರು.

Key words: Davanagere, CM Siddaramaiah, Vinay kumar

Tags :
Davanagere-CM-Siddaramaiah-Vinay kumar
Next Article