ಕೆ.ಆರ್.ಎಸ್. ಜಲಾಶಯಕ್ಕೆ ತಜ್ಞರ ತಂಡ ಕಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಆದೇಶ.
ಬೆಂಗಳೂರು,ಡಿಸೆಂಬರ್,15,2023(www.justkannada.in): ಕೆ.ಆರ್.ಎಸ್.ಜಲಾಶಯದಲ್ಲಿ ಹೂಳು ತುಂಬಿದೆಯೇ? ಮಾಡರ್ನ್ ಸ್ಟ್ಯಾಂಡರ್ಡ್ ಗೆ ಅಣೆಕಟ್ಟು ಹೊಂದಿಕೆಯಾಗುವಂತಿದೆಯೇ? ಎಂಬುದನ್ನು ತಿಳಿಯಲು ತುರ್ತಾಗಿ ಅಲ್ಲಿಗೆ ತಜ್ಞರ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಕ್ಷಣ ನೀರಾವರಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಸೂಚನೆ ನೀಡಿದ್ದು, ತಜ್ಞರ ತಂಡ ಕಳಿಸಿ, ಅಧ್ಯಯನ ನಡೆಸಿ, ಸೂಕ್ತ ಕ್ರಮ ವಹಿಸುವಂತೆ ಆದೇಶಿಸಿದ್ದಾರೆ.
ಡ್ಯಾಂನ ಗರಿಷ್ಠ ಸಾಮರ್ಥ್ಯದ 49.50 ಟಿಎಂಸಿ ನೀರು ಈಗಲೂ ಸಂಗ್ರಹವಾಗುತ್ತಿದೆಯೇ? ಸೀಪೇಜ್ ನಿರ್ವಹಣೆ, ಗೇಟ್ ಸುಸ್ಥಿತಿ ಸೇರಿ ಇನ್ನಿತರ ಅಂಶಗಳನ್ನು ಪರಿಶೀಲಿಸಬೇಕು ಎಂಬುದಾಗಿ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ ಅವರು ಮನವಿಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಆದೇಶವನ್ನು ನೀಡಿದ್ದಾರೆ.
ಮನವಿಯಲ್ಲೇನಿದೆ..?
ಕಾವೇರಿ ಕನ್ನಡ ನಾಡಿನ ಜೀವನದಿಯಾಗಿದೆ. ಇಲ್ಲಿ ಕಟ್ಟಲಾದ ಅಣೆಕಟ್ಟೆಯು ಈ ಭಾಗದ ರೈತರಿಗೆ ಜೀವನ ನೀಡಿದೆ. ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯವೇ ಕನ್ನಂಬಾಡಿ ಕಟ್ಟೆ ಅಥವಾ ಕೃಷ್ಣರಾಜಸಾಗರ. ಇದು ಕೆಆರ್ ಎಸ್ ಎಂದು ಸುಪ್ರಸಿದ್ಧವಾಗಿದೆ.
ಕ್ರಿ.ಶ.1911 ರಲ್ಲಿ ಬ್ರಿಟಿಷರ ಕಾಲದಲ್ಲಿ ಅಣೆಕಟ್ಟೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಕ್ರಿ.ಶ. 1932 ರಲ್ಲಿ ಮೈಸೂರಿನ ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪೂರ್ಣಗೊಂಡಿತು. ಶತಮಾನಕ್ಕೆ ಹತ್ತಿರವಾಗುತ್ತಿರುವ ದೇಶದ ಅತ್ಯಂತ ಪ್ರಮುಖ ಹಾಗೂ ಹಳೆಯ ಅಣೆಕಟ್ಟೆ ಇದಾಗಿದೆ.
ಮಂಡ್ಯ ಜಿಲ್ಲೆಯ ವ್ಯವಸಾಯ, ಕುಡಿಯುವ ನೀರು, ಅಲ್ಲದೆ ಮೈಸೂರು, ಬೆಂಗಳೂರು ಮಹಾ ನಗರಗಳು, ಬೆಂಗಳೂರು, ಗ್ರಾಮಾಂತರ, ಮೈಸೂರು ಜಿಲ್ಲೆಗಳ ಕುಡಿಯುವ ನೀರಿಗೆ ಇದೇ ಅಣೆಕಟ್ಟೆಯನ್ನು ಅವಲಂಬಿಸಲಾಗಿದೆ. ಇದರಿಂದ ಅಣೆಕಟ್ಟೆಯ ಸುರಕ್ಷತೆ, ಕಾರ್ಯನಿರ್ವಹಣಾ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುವ ಅಗತ್ಯವಿದೆ.
ಆಧುನಿಕ ತಂತ್ರಜ್ಞಾನದ ಮೂಲಕ ಸುಭದ್ರಗೊಳಿಸಿ
ಅಣೆಕಟ್ಟೆ ನಿರ್ಮಾಣ ಮಾಡುವ ಕಾಲದಲ್ಲಿ "ಹೈ ಡ್ಯಾಂ ತಂತ್ರಜ್ಞಾನ" ಇರಲಿಲ್ಲ. ಇದರಿಂದ ದೊಡ್ಡ ಗಟ್ಟಿ ಇಡಿ ಕಲ್ಲುಗಳಿಂದ ನಿರ್ಮಾಣವಾಗಿದೆ. ಹಾಗಾಗಿ ಪ್ರಸ್ತುತ ಆಧುನಿಕ ತಂತ್ರಜ್ಞಾನದೊಂದಿಗೆ ಅಣೆಕಟ್ಟೆಯನ್ನು ಸುಭದ್ರಗೊಳಿಸಲು ಕ್ರಮ ವಹಿಸಬೇಕು.
ಸೀಪೇಜ್ ನಿರ್ವಹಣೆ ಪರಿಶೀಲಿಸಿ
ಈ ಅಣೆಕಟ್ಟೆಯಲ್ಲಿ ಡ್ರೈನೇಜ್ ಗ್ಯಾಲರಿ ಇಲ್ಲದೇ ಇರುವುದರಿಂದ ಸೀಪೇಜ್ ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ ಎಂಬ ಬಗ್ಗೆ ತಜ್ಞರಿಂದ ಪರೀಕ್ಷಿಸಿ ವರದಿ ಪಡೆದು, ತೊಂದರೆ ಇದ್ದರೆ, ಸರಿಪಡಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.
ಗೇಟ್ ಸುಸ್ಥಿತಿ ಪರಿಶೀಲಿಸಿ
ಅಣೆಕಟ್ಟೆಯಲ್ಲಿ ನೀರು ತುಂಬಿದಾಗ ಹೊರಬಿಡಲು ಬಳಸುವ ಗೇಟ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಬೇಕು.
ತಜ್ಞರ ತಂಡ ಕಳುಹಿಸಿಕೊಡಿ
ಹ್ಯಾಂಗ್ ಮಾಡಿರುವ ಗೇಟ್ ಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬದಲಾಯಿಸುವ ಕೆಲಸವಾಗುತ್ತಿದೆ. ಈ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರೀಕ್ಷಿಸಲು, ಡ್ರೈ ರನ್ ಮಾಡಿ, ಗೇಟ್ ಗಳು ಒತ್ತಡ ತಡೆದುಕೊಳ್ಳಬಲ್ಲವೇ ಎಂಬುದನ್ನು ಪರಿಶೀಲಿಸಲು ತಂತ್ರಜ್ಞರ ತಂಡವನ್ನು ಕಳುಹಿಸಿಕೊಡಬೇಕು.
ಕಾರ್ಯನಿರ್ವಹಣೆ ಸುರಕ್ಷತೆ ಪರಿಶೀಲನೆಯ ಅಗತ್ಯತೆ.
ಅಣೆಕಟ್ಟೆಯ ಕಾರ್ಯನಿರ್ವಹಣೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು.
ಪ್ರವಾಹದಲ್ಲಿ ಸುರಕ್ಷತೆ ಬಗ್ಗೆ ಲಕ್ಷ್ಯ ಕೊಡುವುದು
ಮಳೆಗಾಲದಲ್ಲಿ ಪ್ರವಾಹ ಬಂದಾಗ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಮುಂಚಿತವಾಗಿ ಯೋಜಿಸಿ, ಯೋಚಿಸಿ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಬೇಕು.
ಒತ್ತುವರಿ ಆಗಿದ್ದರೆ ತೆರವು ಮಾಡುವುದು
ಅಣೆಕಟ್ಟೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದೆಯೇ ಎಂದು ಸರ್ವೇ ಮಾಡಿ, ಹಾಗೇನಾದರೂ ಆಗಿದ್ದಲ್ಲಿ ತೆರವು ಮಾಡಲು ಕ್ರಮ ವಹಿಸಬೇಕು. ಈ ಭಾಗದ ಲಕ್ಷಾಂತರ ಕುಟುಂಬಗಳ ಜೀವನಾಧಾರವಾಗಿ ಈ ಅಣೆಕಟ್ಟೆ ಇರುವುದರಿಂದ ಸರ್ಕಾರ ಇದರ ಸುರಕ್ಷತೆ ಹಾಗೂ ಸುಸ್ಥಿತಿಯ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಬೇಕು ಎಂದು ರೈತರ ಪರವಾಗಿ ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.
Key words: DCM- DK Shivakumar -ordered - experts team - K.R.S reservoir.