For the best experience, open
https://m.justkannada.in
on your mobile browser.

ಕಾವೇರಿ ಜಲಾನಯನ ಪ್ರದೇಶದ 1657 ಕೆರೆಗಳನ್ನು ತುಂಬಿಸಲು ಕ್ರಮ- ಡಿಸಿಎಂ ಡಿ.ಕೆ ಶಿವಕುಮಾರ್

01:17 PM Jul 22, 2024 IST | prashanth
ಕಾವೇರಿ ಜಲಾನಯನ ಪ್ರದೇಶದ 1657 ಕೆರೆಗಳನ್ನು ತುಂಬಿಸಲು ಕ್ರಮ  ಡಿಸಿಎಂ ಡಿ ಕೆ ಶಿವಕುಮಾರ್

ಮಂಡ್ಯ.ಜುಲೈ,22,2024 (www.justkannada.in): ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಕೆ.ಆರ್.ಎಸ್. ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ ನೀರು ಬಿಡುಗಡೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ 1657 ಕೆರೆಗಳನ್ನು ತುಂಬಿಸಲಾಗುವುದು ಎಂದರು.

ಇಂದು ಕೃಷ್ಣರಾಜಸಾಗರ ಅಣೆಕಟ್ಟಿನ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯ ರೀತಿ ಕಾವೇರಿ ಆರತಿ ಮಾಡಲು ಚಿಂತಿಸಲಾಗುತ್ತಿದೆ. ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡಲು ತಿಳಿಸಲಾಗುವುದು ಎಂದರು.

ರೈತರ ಹಿತಕಾಯಲು ಸದಾ ಬದ್ಧ..

ನಮ್ಮ ಸರ್ಕಾರ ರೈತಪರವಾದ ಸರ್ಕಾರವಾಗಿದ್ದು, ಯಾವುದೇ ತೊಂದರೆ ಬಂದರೂ ರೈತರ ಹಿತ ಕಾಯಲು ಸದಾ ಬದ್ಧವಾಗಿರುತ್ತೇವೆ. ಕೃಷಿ ಸಚಿವರು ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ ಎರಡು ಲಕ್ಷ ಹೆಕ್ಟೇರ್ ಬಿತ್ತನೆಯ ಕಾರ್ಯಕ್ರಮ ರೂಪಿಸಿದ್ದು, 5,90,000 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 27 ಲಕ್ಷ ಟನ್ ರಸಗೊಬ್ಬರವನ್ನು ಸಹ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 30 ಲಕ್ಷ ರೈತರಿಗೆ 25 ಸಾವಿರ ಕೋಟಿ  ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ ಮಾಡಲಾಗಿದೆ ಎಂದರು.

ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್:

ಕೆ.ಆರ್.ಎಸ್ ನಲ್ಲಿರುವ ಮ್ಯೂಸಿಕಲ್  ಪಾರ್ಕ್ ಅನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹೊಸ ರೂಪ ನೀಡಲು ಈಗಾಗಲೇ ತಾಂತ್ರಿಕ ವರದಿಯನ್ನು ಪಡೆಯಲಾಗಿದೆ. ಬೃಂದಾವನ ಅಮ್ಯುಸ್‌ ಮೆಂಟ್ ಪಾರ್ಕ್ ಅನ್ನು ಪಿ.ಪಿ.ಪಿ ಮಾದರಿಯಲ್ಲಿ ಟೆಂಡರ್ ಕರೆದು ರೂಪಿಸಲಾಗುವುದು. ಈ ಪಾರ್ಕ್ ನಿಂದ ಸುಮಾರು 8 ರಿಂದ 10 ಸಾವಿರ ಸ್ಥಳೀಯ ಜನರಿಗೆ ಉದ್ಯೋಗ ಸಿಗಲಿದೆ ಎಂದರು.

ಪರಿಶೀಲನೆಯ ವೇಳೆ ಕೃಷಿ ಹಾಗೂ ಮಂಡ್ಯ ಜಿಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸಾಮಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಕೆ.ಎಂ. ಉದಯ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧೀಕ್ಷಕ ಇಂಜಿನಿಯರ್ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: DCM, DK Shivakumar, visit, KRS dam

Tags :

.