HomeBreaking NewsLatest NewsPoliticsSportsCrimeCinema

ವಿ.ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಸಂತಾಪ. 

11:05 AM Apr 29, 2024 IST | prashanth

ಮೈಸೂರು,ಏಪ್ರಿಲ್,29,2024 (www.justkannada.in):  ಅನಾರೋಗ್ಯದಿಂದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕೊನೆಯುಸಿರೆಳೆದಿದ್ದು ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀನಿವಾಸಪ್ರಸಾದ್ ಅವರ ಅಗಲಿಕೆ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆ-ಸಿಎಂ ಸಿದ್ದರಾಮಯ್ಯ

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಅನ್ಯಾಯ-ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ.

ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ.

ಹಳೆಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ  ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು  ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನ ನನಗೆ ನೋವುಂಟು ಮಾಡಿದೆ-ಹೆಚ್.ಡಿ ಕುಮಾರಸ್ವಾಮಿ.

ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಸರಳತೆ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿದ್ದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನ ನನಗೆ ನೋವುಂಟು ಮಾಡಿದೆ.

ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ಅವರ ರಾಜಕೀಯ ಜೀವನ ಮಾದರಿಯ ಹಾದಿ. ಆರು ಅವಧಿಗೆ ಸಂಸದರಾಗಿ, ಎರಡು ಅವಧಿಗೆ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿರುವ ಶ್ರೀ ಪ್ರಸಾದ್ ಅವರು,  27 ವರ್ಷಗಳ ಸುದೀರ್ಘ ಸಂಸತ್ ಸದಸ್ಯರಾಗಿ 7 ಪ್ರಧಾನಿಗಳನ್ನು ಕಂಡಿದ್ದರು. ಅವರು ಅಪರೂಪದಲ್ಲಿ ಅಪರೂಪದ ಜನನಾಯಕರಾಗಿದ್ದರು.

ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು  ಹೆಚ್ ಡಿಕೆ ಟ್ವೀಟ್ ಮಾಡಿದ್ದಾರೆ.

ಶ್ರೀನಿವಾಸ ಪ್ರಸಾದ್ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ- ಪ್ರಿಯಾಂಕ್ ಖರ್ಗೆ.

ಇನ್ನು  ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, ಸಮಸಮಾಜದ ಗಟ್ಟಿ ಪ್ರತಿಪಾದಕರು, ರಾಜ್ಯ ಕಂಡ ಮೇರು ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ ಪ್ರಸಾದ್ ಅವರ ಅಕಾಲಿಕ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ.

ಅವರ ನಿಧನದಿಂದ ರಾಜ್ಯದಲ್ಲಿ ಪ್ರಗತಿಪರ ರಾಜಕಾರಣದ ಕೊಂಡಿ ಕಳಚಿದಂತಾಗಿದೆ. ಬುದ್ದ ಬಸವ ಅಂಬೇಡ್ಕರ್ ತತ್ವಗಳ ಆಧಾರದಲ್ಲಿ ಅನ್ಯಾಯದ ವಿರುದ್ಧದ ಹೋರಾಟದ ಹಾದಿಯನ್ನೇ ಬದುಕಾಗಿಸಿದ್ದ, ವಯಕ್ತಿಕವಾಗಿ ಮಾರ್ಗದರ್ಶಕರಾಗಿದ್ದ ಅವರ ಜೀವನ ನಾಡಿನ ಮುಂದಿನ ಪೀಳಿಗೆಗೆ ಸದಾ ನಂದಾದೀಪದಂತೆ ಉಳಿಯಲಿದೆ.  ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನ ವರ್ಗಕ್ಕೆ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದಿರುವ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್,   ಹಿರಿಯ ರಾಜಕೀಯ ಧುರೀಣ ವಿ. ಶ್ರೀನಿವಾಸ ಪ್ರಸಾದ್  ತಮ್ಮ ಜೀವನದ ಉದ್ದಕ್ಕೂ ಶೋಷಿತರ ಧ್ವನಿಯಾಗಿ ಸಾರ್ವಜನಿಕ ಬದುಕಿನಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರದ ಸೋಂಕಿಲ್ಲದ ಶ್ರೀನಿವಾಸ್ ಪ್ರಸಾದರ ರಾಜಕೀಯ ಆದರ್ಶ ಪ್ರಾಯವಾದದ್ದು. ಶ್ರೀಯುತರ ನಿಧನದಿಂದ ಕರ್ನಾಟಕ ರಾಜ್ಯವು  ಒಬ್ಬ ಶ್ರೇಷ್ಠ ರಾಜಕೀಯ ಚಿಂತಕರನ್ನು ಕಳೆದು ಕೊಂಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಂತಾಪ,

ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದು,  ಐದು ದಶಕಗಳ ಕಾಲ ಸುಧಿರ್ಫ ರಾಜಕೀಯ ಜೀವನದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಹಿರಿಯ ಮುತ್ಸದ್ದಿ ರಾಜಕಾರಿಣಿ ಶ್ರೀಯುತ ವಿ. ಶ್ರೀನಿವಾಸ ಪ್ರಸಾದರವರು. ಇಂದು ಹೃದಯಾಘಾತದಿ೦ದ ನಮ್ಮನ್ನಗಲಿದ ಸುದ್ದಿಯು ನನಗೆ ಅತ್ಯಂತ ದುಃಖವನ್ನು ತಂದಿದೆ. ದಲಿತರು ಹಾಗೂ ಶೋಷಿತರ ಗಟ್ಟಿ ಧ್ವನಿಯಾಗಿ
ತಮ್ಮ ರಾಜಕೀಯ ಜೀವನದುದ್ದಕ್ಕೂ ಹೋರಾಟವನ್ನು ಮಾಡಿಕೊಂಡುಬಂದಿದ್ದರು.

ಇವರ ಅಗಲುವಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಕುಟುಂಬ ಸದಸ್ಯರ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಆ ಭಗವಂತನಲ್ಲಿ
ಪ್ರಾರ್ಥಿಸುತ್ತಾ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದಿದ್ದಾರೆ.

Key words: death, V. Srinivas Prasad­, Condolences

Tags :
condolencesdeathdeath -V. Srinivas Prasad­ -CondolencesV. Srinivas Prasad
Next Article