ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಂತರ ಕ್ಷೇತ್ರ ಹಂಚಿಕೆ ಬಗ್ಗೆ ನಿರ್ಧಾರ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.
ಬೆಂಗಳೂರು,ಜನವರಿ,19,2024(www.justkannada.in): ಜನವರಿ 22 ರಂದು ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು ನಂತರ ಕ್ಷೇತ್ರ ಹಂಚಿಕೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಮುಗಿದ ಮೇಲೆ ಕ್ಷೇತ್ರ ಹಂಚಿಕೆ ಕುರಿತು ತೀರ್ಮಾನಿಸಲಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಮಿತ್ ಶಾ ಹಾಗೂ ಜೆಪಿ ನಡ್ಡಾ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಕ್ಷೇತ್ರಗಳ ಹಂಚಿಕೆಯ ಬಗ್ಗೆ ಎರಡೂ ಪಕ್ಷಗಳಲ್ಲಿ ಅತ್ಯಂತ ಸೌಹಾರ್ದ ಮನೋಭಾವನೆ ಇದೆ. ಯಾವುದೇ ಗೊಂದಲ, ಪ್ರಶ್ನೆಗಳು ಇಲ್ಲ. ನಮ್ಮದು ದೊಡ್ಡ ಪಕ್ಷ, ಜೆಡಿಎಸ್ ಚಿಕ್ಕ ಪಕ್ಷ ಎನ್ನುವ ಭಾವನೆ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರಲ್ಲಿ ಇಲ್ಲ. ಅತ್ಯಂತ ಪ್ರೀತಿ, ವಿಶ್ವಾಸ, ಸ್ನೇಹಪೂರ್ವಕವಾಗಿ ಅವರು ಮಾತುಕತೆ ನಡೆಸಿದ್ದಾರೆ. ದೇವೇಗೌಡರ ಮೇಲೆ ಅವರು ಅಪಾರ ಗೌರವ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೈತ್ರಿಕೂಟವನ್ನು ಬಲಪಡಿಸಿ 28ಕ್ಕೆ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನನ್ನ ಗುರಿ. ಬಿಜೆಪಿ ಗುರಿಯೂ ಇದೇ ಆಗಿದೆ. ಈ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೆಚ್.ಡಿಕೆ ತಿಳಿಸಿದರು.
Key words: Decision- -constituency – rama mandir-innuagration--Former CM-HD Kumaraswamy.