ಇಬ್ಬರು ಮೂರ್ಖರು ಸೇರಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಸೋಲಿಸುವುದೇ ಪ್ರಜಾಪ್ರಭುತ್ವ- ಮರಿತಿಬ್ಬೆಗೌಡ ಬೇಸರ.
ಮೈಸೂರು,ಜೂನ್,8,2024 (www.justkannada.in): ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸೋಲನುಭವಿಸಿದ ಹಿನ್ನೆಲೆ ಬೇಸರ ಹೊರ ಹಾಕಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ, ಇಬ್ಬರು ಮೂರ್ಖರು ಸೇರಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಸೋಲಿಸುವುದೇ ಪ್ರಜಾಪ್ರಭುತ್ವ. ಈ ಮಾತನ್ನ ವಾಜಪೇಯಿಯವರು ಹೇಳಿದ್ದಾರೆ. ಈ ಮಾತು ನನಗೂ ಅನ್ವಯವಾಗುತ್ತದೆ ಎಂದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನಮಗೆ ಸೋಲಾಗಿದೆ. ಈ ರೀತಿಯ ಫಲಿತಾಂಶವನ್ನ ನಾನು ನಿರೀಕ್ಷೆ ಮಾಡಿರಲಿಲ್ಲ. ಚುನಾವಣೆ ಸೋಲಿನ ನೈತಿಕ ಹೊಣೆಯನ್ನ ನಾನೇ ಹೊರುತ್ತೇನೆ. ಚುನಾವಣೆಯಲ್ಲಾದ ಸೋಲಿಗೆ ನಮ್ಮ ನಾಯಕರ ಬಳಿ ಕ್ಷಮೆಯಾಚಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನನ್ನನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ನಿರಂತರವಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದೇನೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಈ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತಿತ್ತು. ಆದರೆ ನನ್ನೆಲ್ಲಾ ಶಿಕ್ಷಕರು ಯಾವುದೋ ಕಾರಣಕ್ಕಾಗಿ ಅನಿರೀಕ್ಷಿತ ಸೋಲನ್ನ ನೀಡಿದ್ದಾರೆ. ಈ ಸೋಲಿನಿಂದ ನಾನು ದೃತಿಗೆಡುವುದಿಲ್ಲ. ಈ ಸೋಲು ಶಿಕ್ಷಕರ ಸೋಲು. ಶಿಕ್ಷಕರು ಕಳಂಕಿತ ಮತದಾರರು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ. ಸೋತಿದ್ದೇನೆ ಎಂದು ಮನೆಯಲ್ಲಿ ಕೂರಲ್ಲ. ಮುಂದಿನ ದಿನಗಳಲ್ಲಿಯು ಶಿಕ್ಷಕರ ಪರವಾಗಿ ಕೆಲಸ ಮಾಡುತ್ತೇನೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮುಂದಾಗುತ್ತೇನೆ ಎಂದು ತಿಳಿಸಿದರು.
ಮರಿತಿಬ್ಬೇಗೌಡ ಅವಕಾಶವಾದಿ ರಾಜಕಾರಣಿ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಮರಿತಿಬ್ಬೇಗೌಡ, ಪಕ್ಷ ಉಳಿಸಿಕೊಳ್ಳಲಿಕ್ಕೆ ಜೆಡಿಎಸ್ ನವರು ಮುಂದಾಗಿದ್ದಾರೆ. ತಮ್ಮ ಉಳಿವಿಗೋಸ್ಕರ ಪಕ್ಷವನ್ನ ಬಿಜೆಪಿಯವರ ಬಳಿ ಅಡವಿಟ್ಟಿದ್ದಾರೆ. ನಾನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷ ಸೇರ್ಪಡೆಯಾಗಿಲ್ಲ. ಪದವೀಧರ ಕ್ಷೇತ್ರದ ಚುನಾವಣೆ ವೇಳೆಯೇ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ನಿರೀಕ್ಷೆ ಸಹ ಮಾಡಿರಲಿಲ್ಲ. ಕಾಂಗ್ರೆಸ್ ಪಕ್ಷ ಸೇರುವಾಗಲು ನಾನು ಯಾವುದೇ ಷರತ್ತು ಹಾಕಿಲ್ಲ. ಪಕ್ಷ ಏನೇ ಜವಾಬ್ದಾರಿ ನೀಡಿದರೂ ಮಾಡುತ್ತೇನೆ. ಇಬ್ಬರು ಮೂರ್ಖರು ಸೇರಿ ಓರ್ವ ಸಮರ್ಥ ಅಭ್ಯರ್ಥಿಯನ್ನು ಸೋಲಿಸುವುದೇ ಪ್ರಜಾಪ್ರಭುತ್ವ. ಈ ಮಾತನ್ನ ವಾಜಪೇಯಿಯವರು ಹೇಳಿದ್ದಾರೆ ಈ ಮಾತು ನನಗೂ ಅನ್ವಯವಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಎಚ್ ಎ ವೆಂಕಟೇಶ್, ಕೆವಿ ಮಲ್ಲೇಶ್ ಭಾಗಿಯಾಗಿದ್ದರು.
Key words: Defeated, Congress, candidate, Maritibbe Gowda