ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡುವಂತೆ ಆಗ್ರಹ.
ಮೈಸೂರು,ಫೆಬ್ರವರಿ,19,2024(www.justkannada.in): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡಿ. ಮೈತ್ರಿ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್ ನಿಂತರೇ ಗೆಲವು ನಿಶ್ಚಿತ ಎಂದು ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರ ಆಗ್ರಹಿಸಿದರು.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರ ಮಾಜಿ ಸಚಿವ ಸಾ.ರಾ.ಮಹೇಶ್ ಗೆ ಟಿಕೆಟ್ ಕೊಡಿ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಿ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಂತಿಮವಾಗಿಲ್ಲ. ರಾಜ್ಯದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಣೆ ಆಗಿಲ್ಲ. ಬಿಜೆಪಿ ನಾಯಕರು ದೊಡ್ಡ ಮನಸು ಮಾಡಿ ಜೆಡಿಎಸ್ ಗೆ ಬಿಟ್ಟು ಕೊಡಲಿ ಎಂದು ಮನವಿ ಮಾಡಿದರು.
ಸಾ.ರಾ.ಮಹೇಶ್ ಮೂರು ಬಾರಿ ಶಾಸಕರಾಗಿದ್ದವರು. ಕೆ.ಆರ್.ನಗರ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ. ಮಡಿಕೇರಿ ಜಿಲ್ಲಾ ಸಚಿವರಾಗಿ ಕೆಲಸ ಮಾಡಿದವರು. ಬಿಜೆಪಿ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೆಡಿಎಸ್ ಪಕ್ಷ ಕೇಳುತ್ತಿರುವುದು ಐದು ಸ್ಥಾನಗಳು ಮಾತ್ರ. ಬಿಜೆಪಿ ಅಭ್ಯರ್ಥಿ ಅಂತಿಮವಾಗದ ಕಾರಣ ಸಾ.ರಾ.ಮಹೇಶ್ ಗೆ ಟಿಕೆಟ್ ಕೇಳುವುದು ನಮಗೆ ಅಪರಾಧ ಎನಿಸಿಲ್ಲ. ಮೈಸೂರು, ಮಂಡ್ಯ, ಹಾಸನ, ಕೋಲಾರ ಸೇರಿ ಐದು ಸ್ಥಾನ ಕೇಳಿದೆ. ಸಾ.ರಾ.ಮಹೇಶ್ ಗೆ ಟಿಕೆಟ್ ಕೊಟ್ಟರೆ ಮೈಸೂರು, ಮಂಡ್ಯ ಗೆಲುವು ಸುಲಭ. ಮೈತ್ರಿ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್ ನಿಂತರೆ ಗೆಲವು ನಿಶ್ಚಿತ. ಎಲ್ಲಾ ಪಕ್ಷದ ನಾಯಕರ ಜೊತೆ ಸಾ.ರಾ. ಮಹೇಶ್ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಮಂಡ್ಯ ಟಿಕೆಟ್ ಬಿಜೆಪಿಗೆ ಬಿಟ್ಟುಕೊಡಿ ಎಂದಿದ್ದ ಬಿಜೆಪಿ ನಾಯಕರಿಗೆ ರವಿಚಂದ್ರ ಟಾಂಗ್ ನೀಡಿದರು.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರು ಹಾಲಿ ಸಂಸದರಾಗಿದ್ದು ಇದೀಗ 3ನೇ ಬಾರಿ ಸ್ಪರ್ಧಿಸಿ ಸತತ ಮೂರನೇ ಬಾರಿಯೂ ಜಯ ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯೂ ಸಹ ಪಟ್ಟು ಹಿಡಿದಿದೆ.
Key words: Demand -Mysore-Kodagu -Lok Sabha seat –JDS-Ravichandra-SA.RA Mahesh