ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ- ಸಂಸದ ಡಾ. ಸಿ ಎನ್ ಮಂಜುನಾಥ್
ಬೆಂಗಳೂರು,ಜುಲೈ,6,2024 (www.justkannada.in): ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್ ಮಂಜುನಾಥ್, ಡೆಂಘಿ ತಡೆಯಲು ತುರ್ತು ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಡೆಂಗ್ಯು ಜ್ವರಕ್ಕೆ ಅಡ್ಮಿಟ್ ಆದವರಿಗೆ, ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯಿತೋ ಅದೇ ರೀತಿ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಸೊಳ್ಳೆಗಳನ್ನು ನಾಶ ಮಾಡಿದರೆ ಮಾತ್ರ ಡೆಂಘಿ ನಿಯಂತ್ರಣ ಸಾಧ್ಯ ಡೆಂಘಿಯನ್ನು ತಡೆಯದಿದ್ದರೆ ಚಿಕನ್ ಗುನ್ಯಾ, ಝೀಕಾ ಸೋಂಕು ಬರಬಹುದು. ಕೋವಿಡ್ ಪ್ಯಾಂಡಮಿಕ್ ಆಗಿದ್ದರೆ ಡೆಂಘಿ ಎಂಡಮಿಕ್ ಆಗಿದೆ. ಎಂಡಮಿಕ್ ಆಗಿದ್ದರಿಂದ ರಾಜ್ಯಾದ್ಯಂತ ಡೆಂಘಿ ಹರಡಿರುವುದು ಡೆಂಘಿ ರೋಗ ತಡೆಯಲು ತುರ್ತು ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದರು.
ಡೆಂಗ್ಯು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡುವುದರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡುತ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಸಲಹೆ ನೀಡಿದರು.
Key words: dengue, medical emergency, MP, Dr. CN Manjunath