ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಕೇಸ್: ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್
ನವದೆಹಲಿ,ಆಗಸ್ಟ್,20,2024 (www.justkannada.in): ಕೋಲ್ಕತಾ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವೈದ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕಾರ್ಯಪಡೆಯನ್ನು ರಚನೆ ಮಾಡಿದೆ.
ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪ್ರಕರಣ ಸಂಬಂಧ ಸುಮುಟೋ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಅವರ ತ್ರಿಸದಸ್ಯ ಪೀಠ, ರಾಷ್ಟ್ರೀಯ ಕಾರ್ಯಪಡೆಯು ಎರಡು ತಿಂಗಳೊಳಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ಕಾರ್ಯಪಡೆಯು ಸುರಕ್ಷತೆ, ಕೆಲಸದ ಪರಿಸ್ಥಿತಿಗಳು ಮತ್ತು ವೈದ್ಯಕೀಯ ವೃತ್ತಿಪರರ ಯೋಗಕ್ಷೇಮ ಮತ್ತು ಇತರ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಈ ಪ್ರಕರಣದ ತನಿಖೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, ಬೆಳಿಗ್ಗೆ ಅಪರಾಧ ಪತ್ತೆಯಾದಾಗ ರಾತ್ರಿ 11:45 ಕ್ಕೆ ಎಫ್‌ಐಆರ್ ಏಕೆ ದಾಖಲಿಸಲಾಗಿದೆ ಎಂದು ಪ್ರಶ್ನಿಸಿತು.
ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಿದ್ದು ಕಳವಳಕಾರಿ. ಇದೊಂದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಮೃತದೇಹ ಕೊಡಲು 3 ಗಂಟೆ ಕಾಯಿಸಿದ್ದಾರೆ. ಎಫ್ ಐಆರ್ ದಾಖಲಿಸಲು ವಿಳಂಬ ಮಾಡಲಾಗಿದೆ. ಈ ಪ್ರಕರಣವು ರಾಷ್ಟ್ರದ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ. ನಾವು ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದೇವೆ ಏಕೆಂದರೆ ಇದು ಕೇವಲ ನಿರ್ದಿಷ್ಟ ಭಯಾನಕ ಕೊಲೆಯ ವಿಷಯವಲ್ಲ. ಆದರೆ ಇದು ಭಾರತದಾದ್ಯಂತ ವೈದ್ಯರ ಸುರಕ್ಷತೆಯ ವ್ಯವಸ್ಥಿತ ಸಮಸ್ಯೆಯನ್ನು ಎತ್ತುತ್ತದೆ ಎಂದು ತಿಳಿಸಿತು.
Key words: doctor, Rape murder case , Supreme Court, National Task Force