ಬಿಎಸ್ ವೈ ವಿರುದ್ದ ದೂರು ನೀಡಿದ ಮಹಿಳೆ ಸಾವು ಕೇಸ್: ತನಿಖೆಯ ಮಾಹಿತಿ ನೀಡುವಂತೆ ಪತ್ರ- ಡಾ.ನಾಗಲಕ್ಷ್ಮಿ ಚೌಧರಿ
ಬೆಂಗಳೂರು,ಸೆಪ್ಟಂಬರ್,2,2024 (www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ದೂರು ನೀಡಿದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಮಾಹಿತಿ ನೀಡುವಂತೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ, ಪ್ರಕರಣದಲ್ಲಿ ಮಾಜಿ ಸಿಎಂ ಇರಲಿ ಜನ ಸಾಮಾನ್ಯರೇ ಇರಲಿ ತಪ್ಪು ಮಾಡಿದ್ದರೆ ಬಿಡುವ ಪ್ರಶ್ನೆಯೇ ಇಲ್ಲ. ಸಂತ್ರಸ್ತೆಯ ತಾಯಿಯ ಸಾವಿನ ಬಗ್ಗೆ ಕುಟುಂಬಸ್ಥರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆ ತಾಯಿ ಮೃತಪಡುವ ಎರಡು ದಿನದ ಹಿಂದೆ ಅಷ್ಟೆ ನನ್ನನ್ನು ಭೇಟಿಯಾಗಿದ್ದರು.ಕ್ಯಾನ್ಸರ್ ನಿಂದ ದಿಢೀರ್ ಸಾವು ಹೇಗೆ ಉಂಟಾಗುತ್ತದೆ ಎಂಬುದೆ ಪ್ರಶ್ನೆ ? ಮೃತದೇಹದ ಹಸ್ತಾಂತರ ವೇಳೆಯೂ ಹಲವು ಲೋಪ ಉಂಟಾಗಿವೆ. ಇದು ಅನುಮಾನಕ್ಕೆ ಕಾರಣ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಸಂತ್ರಸ್ತೆ ಕುಟುಂಬದವರು ಕೇಸ್ ದಾಖಲಿಸಿದ್ದಾರೆ. ಕೇಸ್ ನ ತನಿಖಾ ಪ್ರಗತಿ ವರದಿ ನೀಡಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಸಂತ್ರಸ್ತೆಯ ತಾಯಿಯ ಸಾವಿನ ಬಗ್ಗೆ ಕುಟುಂಬಸ್ಥರು ಇದು ಸಹಜ ಸಾವಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಆಗಲೇಬೇಕಿದೆ. ಹೀಗಾಗಿ 15 ದಿನ ವರದಿ ನೀಡಲು ಕಾಲಾವಕಾಶ ನೀಡಿದ್ದೇನೆ. ಸದ್ಯ ಪ್ರಕರಣದ ತನಿಖೆಯ ಬಗ್ಗೆ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ ಎಂದು ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.
Key words: Dr.Nagalakshmi Chaudhary, BSY, Complaint, woman, death