For the best experience, open
https://m.justkannada.in
on your mobile browser.

ಎಂ.ಉಷಾ ಅವರ‌'ಬಾಳ‌ಬಟ್ಟೆ'ಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ.

06:17 PM May 29, 2024 IST | prashanth
ಎಂ ಉಷಾ ಅವರ‌ ಬಾಳ‌ಬಟ್ಟೆ ಗೆ ಡಾ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಮೈಸೂರು,ಮೇ,29,2024 (www.justkannada.in): ಶಿವಮೊಗ್ಗದ 'ಅಹರ್ನಿಶಿ' ಪ್ರಕಾಶನ  ಪ್ರಕಟಿಸಿದ ಡಾ.ಎಂ.ಉಷಾ ಅವರ  'ಬಾಳ‌ ಬಟ್ಟೆ' ಕಾದಂಬರಿಯನ್ನು 2024ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು 2022 ರಲ್ಲಿ ಸ್ಥಾಪಿಸಿರುವ  ಈ ಪ್ರಶಸ್ತಿಗೆ 2020 - 2023ರ ಅವಧಿಯಲ್ಲಿ ಮಹಿಳೆಯರು ಪ್ರಕಟಿಸಿದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು.

ಲೇಖಕಿಯರು/ಪ್ರಕಾಶಕರು ಕಳುಹಿಸಿದ್ದ 24 ಕಾದಂಬರಿಗಳನ್ನು ಅವಲೋಕಿಸಿದ ಹಿರಿಯ‌ ಲೇಖಕರು, ಸಾಹಿತ್ಯ ವಿಮರ್ಶಕರಾದ  ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ, ಡಾ.ಡಿ.ವಿಜಯಲಕ್ಷ್ಮಿ, ಡಾ.ಎಚ್.ಎಂ.ಕಲಾಶ್ರೀ ಅವರನ್ನೊಳಗೊಂಡ  ಆಯ್ಕೆ ಸಮಿತಿಯು ಉಷಾ ಅವರ ಮೊದಲ‌ ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.  25,000 ರೂ. ನಗದು ಬಹುಮಾನ, ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ.

ವಿಜಯಾ ದಬ್ಬೆ  ಹೆಸರಿನ ಪ್ರಶಸ್ತಿಯನ್ನು ಅವರ ವಿದ್ಯಾರ್ಥಿನಿಯೂ ಆದ  ಭಾಷಾಂತರ, ಮಹಿಳಾ ಅಧ್ಯಯನ, ಸಾಹಿತ್ಯ ವಿಮರ್ಶೆ, ಸಾಂಸ್ಕೃತಿಕ ಅಧ್ಯಯನಗಳಲ್ಲಿ ಎರಡೂವರೆ ದಶಕದಿಂದ ತೊಡಗಿಸಿಕೊಂಡಿರುವ ಉಷಾ ಅವರಿಗೆ ನೀಡಲು ಸಂಸ್ಥೆ‌ ಹೆಮ್ಮೆ ಪಡುತ್ತದೆ. ಜುಲೈ 21ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ. ಉಷಾ ಪರಿಚಯ:

ಮೂಲತಃ‌ ಚಾಮರಾಜನಗರ‌‌ ಜಿಲ್ಲೆಯವರಾದ ಎಂ.ಉಷಾ ಮೈಸೂರು ವಿವಿಯಲ್ಲಿ‌ ಎಂ.ಎ, ಬೆಂಗಳೂರು ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದರು. ಹಂಪಿ‌ ಕನ್ನಡ ವಿವಿ‌‌‌ ಭಾಷಾಂತರ‌ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ‌ನಿರ್ವಹಿಸಿ 2019 ರಲ್ಲಿ ಸ್ವಯಂ‌ ನಿವೃತ್ತಿ ‌ಪಡೆದಿದ್ದಾರೆ.

ಸಂಸ್ಕೃತಿ ಚಿಂತನೆ ಮತ್ತು‌ ಭಾರತೀಯ ಸ್ತ್ರೀವಾದ, ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು, ಮಹಿಳೆ ಮತ್ತು ಜಾತಿ, ಆಧುನಿಕ ಮಹಿಳಾ ಸಾಹಿತ್ಯ,  ಇನ್ನಷ್ಟು ಪುಟಗಳು (ಸಂ), ಸುರುಚಿ, ಒಳಗಣ ರಣರಂಗ ಹೊರಗಣ ಶೃಂಗಾರ , ಭಾಷಾಂತರ ಮತ್ತು ಲಿಂಗರಾಜಕಾರಣ, ಭಾಷಾಂತರ ಪ್ರವೇಶಿಕೆ, ಕನ್ನಡ ಮ್ಯಾಕ್ ಬೆತ್, ಲಿಖ್ಯಂತೆ ದೇಶಭಾಷೆಯೊಳ್, ಹೆಣ್ಣೆಂಬ ಶಬುದ (ಸಂ) ಮುಂತಾದವು ಇವರ ಮುಖ್ಯ ಪ್ರಕಟಣೆಗಳು.

ಇವರ 'ಶೂಲಿ ಹಬ್ಬ' ಬೆಂಗ್ಳೂರು ನಾಟಕೋತ್ಸವ -2013 ರಲ್ಲಿ ಉತ್ತಮ ನಾಟಕ ರಚನಾ ಬಹುಮಾನ‌‌, ಕರ್ನಾಟಕ ಲೇಖಕಿಯರ ಸಂಘದ ಇಂದಿರಾವಾಣಿ ರಾವ್ ದತ್ತಿನಿಧಿ- 2015 ಬಹುಮಾನ ಮತ್ತು 'ಅರ್ಧಕಥಾನಕ' ಭಾಷಾಂತರ ಕೃತಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ‌ಪಡೆದಿವೆ. ಕನ್ನಡ ಮ್ಯಾಕ್ ಬೆತ್ ಕೃತಿ ಕರ್ನಾಟಕ ಸಾಹಿತ್ಯ‌ ಅಕಾಡೆಮಿಯ 2019 ರ ಪಿ.ಶ್ರೀನಿವಾಸ ರಾವ್ ದತ್ತಿ ಮತ್ತು ಬಿಎಂಶ್ರೀ ಪ್ರತಿಷ್ಠಾನದ 2019ರ ಆರಗಂ ವಿಮರ್ಶಾ ಪ್ರಶಸ್ತಿಗಳಿಗೆ ಭಾಜನವಾಗಿದೆ.

Key words: Dr. Vijaya Dabbe, Literary Award, M. Usha

Tags :

.