ಬರ ಪರಿಹಾರ ಕೆಲಸ ಪ್ರಾರಂಭ- ಸಿಎಂ ಸಿದ್ದರಾಮಯ್ಯ.
ವಿಜಯಪುರ, ನವೆಂಬರ್ 20,2023(www.justkannada.in): ಬರ ಪರಿಹಾರದ ಕೆಲಸ ಪ್ರಾರಂಭವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ. ಮೇವಿಗೆ ಅಭಾವವಿಲ್ಲ, ಜನರಿಗೆ ಕೆಲಸ ಕೊಡುವ ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಜಯಪುರ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬರಗಾಲ ಬಂದಾಗ 150 ದಿನಗಳ ಕೆಲಸ ನೀಡುವುದು ಕಡ್ಡಾಯ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಅನುಮತಿ ಕೋರಿ ನಾವು ಪತ್ರ ಬರೆದಿದ್ದು ಇಂದಿನವರೆಗೂ ಉತ್ತರ ಬಂದಿಲ್ಲ ಎಂದರು.
ಉತ್ತರವಿಲ್ಲ
ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ಬಂದು ಹೋಗಿ ಒಂದು ತಿಂಗಳ ಮೇಲಾಗಿದ್ದರೂ ಇಂದಿನವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲು ಬರೆದಿರುವ ಪತ್ರಕ್ಕೂ ಕೆಂದ್ರದಿಂದ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪಕ್ಷದ್ದು ನಾವು ನೋಡಿಕೊಳ್ಳುತ್ತೇವೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಕಾಯುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
Key words: Drought- compensation- work- started- CM Siddaramaiah