For the best experience, open
https://m.justkannada.in
on your mobile browser.

ಈ ಹಣ ಸಾಲದು, ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತೆ- ಸಿಎಂ ಸಿದ್ದರಾಮಯ್ಯ.

02:44 PM Apr 27, 2024 IST | prashanth
ಈ ಹಣ ಸಾಲದು  ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತೆ  ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಏಪ್ರಿಲ್,27,2024 (www.justkannada.in): ಕೇಂದ್ರ ಸರ್ಕಾರ ನೀಡಿರುವ ಬರಪರಿಹಾರದ ಹಣ ಸಾಲುವುದಿಲ್ಲ. ಹೀಗಾಗಿ ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ,  ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ ಕೊಡಿಸಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದಗಳು. ಎನ್ ಡಿ ಆರ್ ಎಫ್ ನಿಯಮಾವಳಿ ಪ್ರಕಾರ ರಾಜ್ಯಕ್ಕೆ ರೂ.18,171 ಕೋಟಿ ನೀಡಬೇಕಾಗಿದ್ದರೂ ಕೇಂದ್ರ ಸರ್ಕಾರ ಕೇವಲ ರೂ. 3,498 ಕೋಟಿಗೆ ಅನುಮೋದನೆ ನೀಡಿ, ರೂ. 3,454 ಕೋಟಿ ಬಿಡುಗಡೆ ಮಾಡಿದೆ. ಬರಪರಿಹಾರಕ್ಕಾಗಿ ಈ ಹಣ ಸಾಲದು. ಬಾಕಿ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಕಾಳಜಿಯಿಂದ ಈ ಬರ ಪರಿಹಾರ ನೀಡಿಲ್ಲ. ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ನಮ್ಮಲ್ಲಿನ ಬರಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದೆವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗೆ ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮನವರಿಕೆಯಾಗಿದೆ. ನ್ಯಾಯಾಲಯ ವಿಚಾರಣೆ ವೇಳೆ ಚಾಟಿ ಬೀಸಿದ ನಂತರ ವಾರದ ಅವಧಿಯೊಳಗೆ ಬರ ಪರಿಹಾರ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ಗೆ  ವಚನ ನೀಡಿತ್ತು. ಅದನ್ನು ಪಾಲಿಸಲಿಕ್ಕಾಗಿ ಒಲ್ಲದ ಮನಸ್ಸಿನಿಂದ ಈ ಪರಿಹಾರ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದರಲ್ಲಿ ಬಿಜೆಪಿಯ ನಾಯಕರದ್ದಾಗಲಿ, ಕೇಂದ್ರ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ.  ಇದು ಕೃಷಿ ಕ್ಷೇತ್ರ ಮತ್ತು ರಾಜ್ಯದ ರೈತರ ಮೇಲೆ ಸುಪ್ರೀಂಕೋರ್ಟ್  ಇಟ್ಟುಕೊಂಡಿರುವ ಕಾಳಜಿಯ ಫಲ. ಸ್ವಲ್ಪವಾದರೂ ಪರಿಹಾರವನ್ನು ನೀಡದೆ ಇದ್ದರೆ ರೊಚ್ಚೆದ್ದಿರುವ ಕರ್ನಾಟಕದ ಜನ  ಚುನಾವಣಾ ಪ್ರಚಾರಕ್ಕಾಗಿ ತಮ್ಮನ್ನು ರಾಜ್ಯಕ್ಕೆ ಕಾಲಿಡಲು ಬಿಡಲಾರರು ಎಂಬ ಭಯವೂ ಈ ಪರಿಹಾರ ಘೋಷಿಸಲು ಕಾರಣವಾಗಿದೆ. ಈ ಅಲ್ಪ ಪರಿಹಾರವನ್ನು ತಮ್ಮ ಸಾಧನೆ ಎಂದು ರಾಜ್ಯದ ಬಿಜೆಪಿ ನಾಯಕರು ಬಿಂಬಿಸಲು ಹೊರಟರೆ ರಾಜ್ಯದ ಜನ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಮನವಿ ಮಾಡುತ್ತೇನೆ.

ಈ ಬರ ಪರಿಹಾರದ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿದ್ದೇನೆ. ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡಾ ಕೇಂದ್ರ ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ನಾವು 13-9-2023ರಂದು ಘೋಷಿಸಿದ್ದೆವು. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ನಾವು ಪರಿಹಾರ ಕೇಳಿರುವುದು ಹೆಚ್ಚು ಕಡಿಮೆ ಅದರ ಅರ್ಧದಷ್ಟು ಅಂದರೆ ರೂ.18,171 ಕೋಟಿ. ಉಳಿದ ಹಣವನ್ನು ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೇ ಭರಿಸುತ್ತಿದೆ. ಈಗ ಬಿಡುಗಡೆಯಾಗಿರುವುದು ರೂ. 3,454 ಕೋಟಿ ಮಾತ್ರ. ಉಳಿದ ಪರಿಹಾರಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words:  drought relief, continue, CM Siddaramaiah

Tags :

.