ಬರ ಪರಿಹಾರ ಬಿಡುಗಡೆಗೆ ಕೇಂದ್ರ ಒಪ್ಪಿಗೆ: ರಾಜ್ಯದ ಜನತೆಗೆ ಸಿಕ್ಕ ಜಯ- ಸಚಿವ ಕೃಷ್ಣಭೈರೇಗೌಡ.
ನವದೆಹಲಿ, ಏಪ್ರಿಲ್,22,2024 (www.justkannada.in): ಬರ ಪರಿಹಾರ ನೀಡುವ ಬಗ್ಗೆ ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದಕ್ಕೆ ಸಂಬಂಧಪಟ್ಟಂತಹ ಪೂರ್ವಾನುಮತಿಗಳನ್ನು ಚುನಾವಣಾ ಆಯೋಗಗಳಿಂದ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಮೂಲಕ ರಾಜ್ಯ ಸರ್ಕಾರದ ಕಾನೂನು ಸಮರಕ್ಕೆ, ರಾಜ್ಯದ ಜನತೆಗೆ ಜಯ ಸಿಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಪರಿಸ್ಥಿತಿ ಆವರಿಸಿದ್ದು ಈ ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿ ಮನವಿ ಮಾಡಿತ್ತು. 17,400 ಕೋಟಿ ರೂ.ಗಳ ಬರ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಬರಪರಿಹಾರ ಬಿಡುಗಡೆ ಮಾಡಿರಲಿಲ್ಲ.
ಹೀಗಾಗಿ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಎದುರು ಒಂದು ವಾರದೊಳಗಾಗಿ ಬರ ನಿರ್ವಹಣೆಯ ಅನುದಾನದ ಬಗ್ಗೆ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯಕ್ಕೆ ಬರಪರಿಹಾರ ಬಿಡುಗಡೆಗೆ ಕೇಂದ್ರ ಒಪ್ಪಿಕೊಂಡಿದೆ. ಸುಪ್ರೀಂಕೋರ್ಟ್ ನಲ್ಲೆ ರಾಜ್ಯದ ಜನತೆಗೆ ಜಯ ಸಿಕ್ಕಿದೆ . ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿತ್ತು. ನಮ್ಮ ರೈತರನ್ನ 7 ತಿಂಗಳುಗಳ ಕಾಲ ಸತಾಯಿಸಿದರ. 1 ತಿಂಗಳೋಳಗೆ ಪರಿಹಾರ ನೀಡಬೇಕು ಎಂಬ ಕಾನೂನಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿತ್ತು ಎಂದರು.
Key words: drought relief, Minister, Krishnabhairegowda