ಕುಲಸಚಿವರಾಗಿ ಮಾಜಿ ಮುಡಾ ಆಯುಕ್ತ ವರ್ಗಾವಣೆ; ಸರ್ಕಾರದ ವಿರುದ್ದ ಶಾಸಕ ಶ್ರೀವತ್ಸ ಆಕ್ರೋಶ
ಮೈಸೂರು,ಆಗಸ್ಟ್,30,2024 (www.justkannada.in): ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನ ಕುಲಸಚಿವರಾಗಿ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, ಇದೊಂದು ದುರಂತ, ಸರ್ಕಾರ ಅಧಿಕಾರಿಗಳ ರಕ್ಷಣೆಗೆ ಯಾಕೆ ನಿಂತಿದೆ ಎಂಬುದು ತಿಳಿಯುತ್ತಿಲ್ಲ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದ ಅಧಿಕಾರಿಗೆ ಪ್ರಮೋಶನ್ ಕೊಟ್ಟು ವರ್ಗಾವಣೆ ಮಾಡಿದ್ದಾರೆ. ನೀವೇನಾದರೂ ಹೇಳಿಕೊಳ್ಳಿ ನಮಗೆ ಕಮಿಷನ್ ಬಂದರೆ ಸಾಕು ಎಂಬ ಮನಸ್ಥಿತಿಯಲ್ಲಿ ಸರ್ಕಾರ ಇದೆ. ಸಿದ್ದರಾಮಯ್ಯನವರು ಅಧಿಕಾರಿಗಳು ತಪ್ಪು ಮಾಡಿದರೆ ಆ ಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ ಮುಡಾ ಪ್ರಕರಣದಲ್ಲಿ ಈ ರೀತಿ ನಿರ್ಧಾರ ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನೇಶ್ ಕುಮಾರ್, ನಟೇಶ್ ಕುಮಾರ್ ವಿರುದ್ಧ ದೂರು ದಾಖಲಿಸುತ್ತೇನೆ
ಮುಡಾದಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯರಂತಹ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಿರುವ ದೊಡ್ಡ ವ್ಯಕ್ತಿ ಯಾರೆಂದು ತಿಳಿಯುತ್ತಿಲ್ಲ. ಇಂದು ಸಂಜೆ ಅಥವಾ ನಾಳೆ ನಾನು ಲೋಕಾಯುಕ್ತ ಅಧಿಕಾರಿಗಳನ್ನ ಭೇಟಿ ಮಾಡುತ್ತೇನೆ. ಮುಡಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ದಿನೇಶ್ ಕುಮಾರ್, ನಟೇಶ್ ಕುಮಾರ್ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ನಾಳೆ ಕಾಂಗ್ರೆಸ್ ಶಾಸಕರಿಂದ ರಾಜಭವನ ಚಲೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಶ್ರೀವತ್ಸ, ನ್ಯಾಯಾಲಯದ ತೀರ್ಪು ನಿನ್ನೆ ಹೊರ ಬೀಳುತ್ತದೆ ಎಂದು ಕಾಂಗ್ರೆಸ್ ನಾಯಕರು ಅಂದುಕೊಂಡಿದ್ದರು. ತೀರ್ಪು ವಿರುದ್ಧವಾಗಿ ಬೀಳಬಹುದು ಎಂದು ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಸದ್ಯ ಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿದೆ. ಸಿಎಂ ಪರ ವಕೀಲರ ವಾದ ಮುಗಿದಿದೆ. ರಾಜ್ಯಪಾಲರ ಪರ ವಕೀಲರು ನಾಳೆ ವಾದ ಮಂಡನೆ ಮಾಡಲಿದ್ದು, ಈಗಾಗಲೇ ಕೋರ್ಟ್ ಗೆ ಸಾಕಷ್ಟು ದಾಖಲೆಗಳನ್ನ ನೀಡಲಾಗಿದೆ. ಮುಡಾದಲ್ಲಿ ಅಕ್ರಮ ಆಗಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ನಾಳೆ ಕೋರ್ಟ್ ತೀರ್ಪು ಯಾವ ರೀತಿ ಬರುತ್ತೆ ಕಾದು ನೋಡೋಣ ಎಂದು ಶ್ರೀವತ್ಸ ಹೇಳಿದರು.
Key words: Ex-Muda Commissioner, Registrar, MLA Srivatsa