ಪಾರ್ಶ್ವವಾಯು, ಹೃದಯಾಘಾತಕ್ಕೊಳಗಾದವರಿಗೆ ದುಬಾರಿ ಬೆಲೆಯ ಚುಚ್ಚುಮದ್ದು ಉಚಿತ: ದಿನೇಶ್ ಗುಂಡೂರಾವ್
ಮೈಸೂರು, ಅಕ್ಟೋಬರ್ 23, 2023 (www.justkannada.in): ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಬೆಲೆಯ ಚುಚ್ಚುಮದ್ದುಗಳನ್ನು 'ಸ್ಟೆಮಿ' ಯೋಜನೆಯಡಿ ಉಚಿತವಾಗಿ ಒದಗಿಸಲು ಕ್ರಮವಹಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾಹಿತಿ ನೀಡಿದ್ದು, 60 ಸಾವಿರ ರೂ. ದರದ 'ಆರ್‌ಟಿ ಪ್ಲಸ್' ಚುಚ್ಚುಮದ್ದು, ಹೃದಯಾಘಾತ ನಿರ್ವಹಣೆಗೆ 40 ಸಾವಿರ ದರದ 'ಟೆನೆಕ್ಟ್ ಪ್ಲಸ್' ಚುಚ್ಚು ಉಚಿತವಾಗಿ ಸಿಗಲಿದೆ.
ಈ ಯೋಜನೆಗೆ ಬಿಪಿಎಲ್, ಎಪಿಎಲ್ ಎಂದು ವಿಂಗಡಿಸಿಲ್ಲ. ಪಾರ್ಶ್ವವಾಯುವಿಗೆ ಒಳಗಾದವರಿಗೆ ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್ ನಡೆಸಿ, ರಕ್ತನಾಳ ಬ್ಲಾಕ್ ಆಗಿರುವುದು ದೃಢಪಟ್ಟಲ್ಲಿ ಈ ಚುಚ್ಚುಮದ್ದನ್ನು ನೀಡಲಾಗುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ, ಚುಚ್ಚುಮದ್ದನ್ನು ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪಾರ್ಶ್ವವಾಯುವಿನಿಂದ ಅಂಗಾಂಗ ವೈಫಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಅದೇ ರೀತಿ, ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷದೊಳಗೆ ಅಗತ್ಯ ಚಿಕಿತ್ಸೆ ಸಿಗದಿದ್ದರೆ ಮೃತಪಡುವ ಸಂಭವ ಇರುತ್ತದೆ. ಸರಕಾರದ ಈ ಯೋಜನೆ ಸಾಕಷ್ಟು ಜನರಿಗೆ ನೆರವಾಗಲಿದೆ.