ದಸರಾ ದೀಪಾಲಂಕಾರ ನ.5ರವರೆಗೆ ಮುಂದುವರಿಕೆ: ಸಚಿವ ಡಾ.ಎಚ್.ಸಿ.ಮಹಾದೇವಪ್ಪ
ಮೈಸೂರು, ಅಕ್ಟೋಬರ್ 29, 2023 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾವನ್ನು ಯಶಸ್ವಗೊಳಿಸಿದ ಸಾರ್ವಜನಿಕರು,ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಅಭಿನಂದಿಸುವುದಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ಸರ್ಕಾರಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಉಪಹಾರ ಕೂಟದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ವೈಭವದ ದಸರಾ ಆಚರಿಸುತ್ತೇವೆಂದು ಹೇಳಿದ್ದೆವಾದರೂ ಮುಂದಿನ ದಿನಗಳಲ್ಲಿ ಮಳೆ ಭಾರಿ ಪ್ರಮಾಣದಲ್ಲಿ ಕೊರತೆಯಾದುದರಿಂದ ಅದ್ದೂರಿಯೂ ಅಲ್ಲದ ಸರಳವೂ ಅಲ್ಲದ ಸಾಂಪ್ರದಾಯಕ ದಸರಾ ಆಯೋಜಿಸಲು ತೀರ್ಮಾನಿಸಲಾಯಿತು ಎಂದರು.
ಈ ಬಾರಿಯ ದಸರಾದಲ್ಲಿ ಕಾರ್ಯನಿರ್ವಹಿಸಿದ ಬಹುತೇಕ ಅಧಿಕಾರಿಗಳು ಹೊಸಬರಾದರು ತಮ್ಮ ಜವಾಬ್ದಾರಿಗಳನ್ನ ಸಮರ್ಪಕವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಿ 10 ಲಕ್ಷಕ್ಕೂ ಹೆಚ್ಚು ಜನ ಸೇರಿದರೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಾರ್ಯ ನಿರ್ವಹಿಸಿದ್ದಾರೆಂದರು.
ದಸರಾ ದೀಪಾಲಂಕಾರ ನ.5 ರ ವರಗೆ ಇರಲಿದ್ದು, ಈ ಬಾರಿಯ ದೀಪಾಲಂಕಾರದಲ್ಲಿ ಸಾಮಾಜಿಕ ಸಂದೇಶಗಳು,ಪ್ರಜಾಪ್ರಭುತ್ವ , ಸಂವಿಧಾನ, ನಾಲ್ವಡಿಯವರ ಕೊಡುಗೆಗಳು ರಾರಾಜಿಸಿವೆ ಹಾಗೂ ಸಂಬಂಧಿಸಿದ ದಸರಾ ಖರ್ಚು ವೆಚ್ಚಗಳನ್ನು ಜಿಲ್ಲಾಧಿಕಾರಿಗಳು ಶೀಘ್ರವೇ ನೀಡಲಿದ್ದಾರೆ ಎಂದರು.
ಒಟ್ಟಾರೆಯಾಗಿ ದಸರಾ ಯಶಸ್ಸಿಗೆ ಸಹಕಾರ ನೀಡಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು,ಸಚಿವರುಗಳು, ಜನಪ್ರತಿನಿಧಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದರು.