ಸರ್ಕಾರಿ ಜಾಗ ಸಿಕ್ಕರೆ ಬೊಕ್ಕಹಳ್ಳಿ ಗ್ರಾಮ ಸ್ಥಳಾಂತರಕ್ಕೆ ಚಿಂತನೆ - ಸಚಿವ ಡಾ.ಹೆಚ್.ಸಿ. ಮಹದೇವಪ್ಪ
ಮೈಸೂರು, ಆಗಸ್ಟ್,3 ,2024 (www.justkannada.in): ವಾಡಿಕೆಗಿಂತ ಈ ಬಾರಿ ಶೇಕಡ 75 ರಷ್ಟು ಹೆಚ್ಚು ಮಳೆ ಸುರಿದಿದ್ದು ಬೊಕ್ಕಹಳ್ಳಿ ಗ್ರಾಮಕ್ಕೆ ಹೆಚ್ಚು ನೀರು ನುಗ್ಗಿದೆ, ಗ್ರಾಮಸ್ಥರು ಗ್ರಾಮದ ಸ್ಥಳಾಂತರಕ್ಕೆ ಒತ್ತಾಯಿಸುತಿದ್ದು ಅಂತಹ ಸಂದರ್ಭ ಸೃಷ್ಟಿಯಾಗಿಲ್ಲ. ಅದರೂ ಗ್ರಾಮಸ್ಥರ ಮನವಿ ಮೇರೆಗೆ ಸರ್ಕಾರಿ ಜಾಗದ ಲಭ್ಯತೆಯ ಆಧಾರದಂತೆ ಗ್ರಾಮ ಸ್ಥಳಾಂತರಿಸಲು ಪರಿಶೀಲಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅಭಿಪ್ರಾಯಿಸಿದರು.
ನಂಜನಗೂಡು ತಾಲ್ಲೂಕು ಬೊಕ್ಕಹಳ್ಳಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯಡಾ.ಯತೀಂದ್ರ ಅವರ ಜತೆಗೂಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಹೊಳೆಯಿಂದ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಂದುದರಿಂದ ಗ್ರಾಮದ ಕೆಲ ಜಮೀನುಗಳು ಮುಳುಗಡೆಯಾಗಿ, ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 80 ಮನೆಗಳಿಗೆ ನೀರು ನುಗ್ಗಿದ್ದು, 215 ಜನರನ್ನು ಸ್ಥಳಾಂತರಿಸಲಾಗಿದೆ. 78 ಜನ ಕಾಳಜಿ ಕೇಂದ್ರದಲ್ಲಿ ಉಳಿದಿದ್ದಾರೆ. ಜಿಲ್ಲಾಡಳಿತ ತಗ್ಗಿನ ಪ್ರದೇಶದ ಮನೆಗಳವರಿಗೆ ಜಾಗೃತಿ ಮೂಡಿಸುವುದರೊಂದಿಗೆ ಊಟ,ವಸತಿಗಳೊಂದಿಗೆ ಸಮರ್ಪಕ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದರು.
ಒಟ್ಟಾರೆ ಜಿಲ್ಲೆಯಲ್ಲಿ 345 ಮನೆಗಳಿಗೆ ಹಾನಿಯಾಗಿದ್ದು, 256 ಮನೆಗಳಿಗೆ ಪರಿಹಾರ ನೀಡಲಾಗಿದೆ, 268 ಮನೆಗಳು ಭಾಗಶಃ ಹಾನಿಯಾಗಿವೆ ಇವುಗಳಿಗೆ ಎನ್.ಡಿ.ಆರ್.ಎಫ್ ನಿಯಮಾವಳಿಯಂತೆ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 220 ಶಾಲೆಗಳು,60 ಅಂಗನವಾಡಿ ಕೇಂದ್ರಗಳು, 40 ರಿಂದ 50 ಕಿಮೀ ಗ್ರಾಮೀಣ ರಸ್ತೆ, 25 ಕಿಮೀ ಪಿಡ್ಲೂಡಿ ರಸ್ತೆ ಹಾಳಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ, ಜಿಲ್ಲಾಧಿಕಾರಿ ಲಕ್ಷೀಕಾಂತ ರೆಡ್ಡಿ, ಜಿ.ಪಂ.ಸಿಇಒ ಕೆ.ಎಂ.ಗಾಯತ್ರಿ,ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Key words: flood, Bokkahalli, government land, Minister, H.C. Mahadevappa