ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ-ಮಾಜಿ ಸಿಎಂ ಬೊಮ್ಮಾಯಿ ಟೀಕೆ.
ಬೆಂಗಳೂರು,ಜನವರಿ,9,2024(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಭೀಕರ ಬರಗಾಲವಿದೆ. ಆದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬರ, ಪ್ರವಾಹದಂತಹ ಸಂಕಷ್ಟ ಸಂದರ್ಭದಲ್ಲಿ ಜನರ ನೆರವಿಗೆ ಸರ್ಕಾರ ಧಾವಿಸಿ ಸಹಾಯ ಮಾಡಿದರೆ ಸರ್ಕಾರ ಜೀವಂತ ಇದ್ದಂತೆ. ಸಂಕಷ್ಟದಲ್ಲಿರುವ ರೈತರ ಕಡೆಗೆ ನೋಡದಿದ್ದರೆ ಅದು ಸತ್ತಂತೆ. ರಾಜ್ಯ ಸರ್ಕಾರ ಎನ್‍ಡಿಆರ್ ಎಫ್ ಮತ್ತು ಎಸ್‍ಡಿ ಆರ್‍ಎಫ್ ನಿಯಮದಲ್ಲಿ ಎಷ್ಟು ಹಣವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
18 ಸಾವಿರ ಕೋಟಿ ರೂ. ಬರಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಆದರೆ ರೈತರಿಗೆ ತಲಾ 2000 ರೂ. ನೀಡುವುದಾಗಿ ಹೇಳಿ ತಿಂಗಳು ಕಳೆದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಆಧಾರ್ ಜೋಡಣೆಯ ಕಥೆ ಹೇಳುತ್ತಿದ್ದಾರೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಮಾಹಿತಿ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ 14 ಲಕ್ಷ ರೈತರಿಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದೆವು ಎಂದು ಬೊಮ್ಮಾಯಿ ಕಿಡಿಕಾರಿದರು.
Key words: Former CM –Bommai-criticizes - government - not responding-people