ಅಧರ್ಮದ-ಅಮಾನವೀಯ ಕೆಲಸ ಮಾಡಿ ನಾಟಕೀಯ ಪೂಜೆ ಮಾಡಿದರೆ ಆ ಪೂಜೆ ದೇವರು ಒಪ್ಪಿಕೊಳ್ಳಲ್ಲ: ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು, ಜನವರಿ, 22,2024(www.justkannada.in): ಅಧರ್ಮದ-ಅಮಾನವೀಯ ಕೆಲಸ ಮಾಡಿ ನಾಟಕೀಯವಾಗಿ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದು ಆದರ್ಶ ಶ್ರೀರಾಮ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ನಾಸ್ತಿಕನಲ್ಲ-ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳು ಇವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾತ್ತೇವೆ, ಗುಡಿ ಕಟ್ಟುತ್ತೇವೆ, ಪೂಜಿಸುತ್ತೇವೆ ಎಂದರು.
ಯಾವುದೇ ಧರ್ಮ ಜಾತಿ-ಧರ್ಮ ಆಧಾರದ ಮನುಷ್ಯ ದ್ವೇಷವನ್ನು ಹೇಳುವುದಿಲ್ಲ. ಶ್ರೀರಾಮ ಸಮಾಜಮುಖಿ ಆಗಿದ್ದರು. ಒಬ್ಬ ಮಡಿವಾಳನ ಮಾತಿಗೂ ಬೆಲೆ ಕೊಟ್ಟರು. ಪಿತೃವಾಕ್ಯ ಪರಿಪಾಲನೆಗೆ ವನವಾಸಕ್ಕೆ ಹೋದರು. ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವರೆಲ್ಲಾ ಸಕುಟುಂಬಸ್ಥರು ಎಂದು ವಿವರಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಆಶಯ ಶ್ರೀರಾಮನ ಆದರ್ಶ ಮತ್ತು ವ್ಯಕ್ತಿತ್ವದಲ್ಲಿದೆ. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು ಎನ್ನುವುದೇ ರಾಮಾಯಣ, ಮಹಾಭಾರತದ ಸಂದೇಶ ಎಂದು ವಿವರಿಸಿದರು.
ಪರಿಶಿಷ್ಠ ಪಂಗಡ ಸಮುದಾಯದ ವಾಲ್ಮೀಕಿ ಅವರು ರಾಮಾಯಣವನ್ನು ಬರೆದು ವಿಶ್ವಕ್ಕೆ ಕೊಟ್ಟರು. ದೇವರು ನಮ್ಮ ಆತ್ಮ ಮತ್ತು ಶರೀರದಲ್ಲೇ ಇದ್ದಾನೆ ಎಂದು ಬಸವಣ್ಣನವರು ನುಡಿದರು. ದೇಹವೇ ದೇಗುಲ ಎನ್ನುವ ಸಂದೇಶವನ್ನು ಮನುಷ್ಯ ಪ್ರಪಂಚಕ್ಕೆ ನೀಡಿದ್ದಾರೆ ಎಂದು ವಚನಗಳನ್ನು ಉದಾಹರಿಸಿದರು.
ಜೈ ಶ್ರೀರಾಮ್ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಎನ್ನುತ್ತಾ ತಾವೂ ಜೈ ಶ್ರೀರಾಮ್ ಘೋಷಣೆ ಕೂಗಿ ನೆರೆದಿದ್ದ ಸಾರ್ವಜನಿಕರಿಗೂ ಘೋಷಣೆ ಕೂಗಿಸಿದರು.
ಸಚಿವರಾದ ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಆಯೋಗದ ಉಪಾಧ್ಯಕ್ಷರಾದ ರಾಜು ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಅರವಿಂದ ಲಿಂಬಾವಳಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Key words: God -not accept -- inhuman work - dramatic pooja- CM -Siddaramaiah