For the best experience, open
https://m.justkannada.in
on your mobile browser.

ಅಕ್ರಮ ಸುಲಿಗೆಯಲ್ಲಿ 'ಸಿದ್ದಹಸ್ತ'ವಾಗಿರುವ ಸರಕಾರ ಈಗ SSLC ಮಕ್ಕಳ ಕಿಸೆಗೂ ಕೈ ಹಾಕಿದೆ-ಹೆಚ್.ಡಿಕೆ ಕಿಡಿ.

03:37 PM Feb 03, 2024 IST | prashanth
ಅಕ್ರಮ ಸುಲಿಗೆಯಲ್ಲಿ  ಸಿದ್ದಹಸ್ತ ವಾಗಿರುವ ಸರಕಾರ ಈಗ sslc ಮಕ್ಕಳ ಕಿಸೆಗೂ ಕೈ ಹಾಕಿದೆ ಹೆಚ್ ಡಿಕೆ ಕಿಡಿ

ಬೆಂಗಳೂರು,ಫೆಬ್ರವರಿ,3,2024(www.justkannada.in): ಜನತೆಗೆ 5 ಗ್ಯಾರಂಟಿ ಕೊಟ್ಟೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅದೆಷ್ಟು ಅಧಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲಿದೆ. ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರಕಾರ, ಈಗ SSLC ಮಕ್ಕಳ ಕಿಸೆಗೂ ಕೈ ಹಾಕಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಹೆಚ್.ಡಿಕೆ, ಅಕ್ರಮ ಸುಲಿಗೆಯಲ್ಲಿ 'ಸಿದ್ದಹಸ್ತ'ವಾಗಿರುವ ಸರಕಾರ, ಈಗ ಕಾನೂನು ಬದ್ಧವಾಗಿಯೇ ಸುಲಿಗೆ ಮಾಡುತ್ತಿದೆ, ಅದೂ ಲಜ್ಜೆಗೆಟ್ಟು. ಇದೇ ಫೆಬ್ರವರಿ 26ರಿಂದ ಮಾರ್ಚ್ 3ರವರೆಗೂ ನಡೆಯಲಿರುವ 2023-24ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆಗೆ ಆಗುವ ವೆಚ್ಚವನ್ನು ನಾಚಿಕೆಗೆಟ್ಟ ಸರಕಾರ ಮಕ್ಕಳಿಂದಲೇ ವಸೂಲಿ ಮಾಡಲು ಹೊರಟಿದೆ.

ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಸಾಗಣೆ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆಯೇ ಹೇರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ವೆಚ್ಚ ವಸೂಲಿ ಮಾಡುವಂತೆ ಎಲ್ಲಾ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದು ಸರಕಾರ ಎಷ್ಟರ ಮಟ್ಟಿಗೆ ದಿವಾಳಿಯೆದ್ದು ಹೋಗಿದೆ ಎನ್ನುವುದಕ್ಕೆ ಉದಾಹರಣೆ ಎಂದು ಹೆಚ್.ಡಿಕೆ ಕಿಡಿಕಾರಿದ್ದಾರೆ.

ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ವೆಚ್ಚ ವಸೂಲಿ ಮಾಡಿ, ಆ ಮೊತ್ತವನ್ನು ಇಲಾಖೆ ಉಪ ನಿರ್ದೇಶಕರು (ಆಡಳಿತ), ಇವರ ಖಾತೆಗೆ ಜಮೆ ಮಾಡಬೇಕು ಎಂದು ಅವರು ಫರ್ಮಾನು ಹೊರಡಿಸಿದ್ದಾರೆ.

ಗ್ಯಾರಂಟಿ ಕೊಟ್ಟು ಬಡವರ ಉದ್ಧಾರ ಮಾಡುತ್ತಿದ್ದೇವೆ ಎಂದು ಬೀಗುವ ಸರಕಾರಕ್ಕೆ, ಅದೇ ಬಡಮಕ್ಕಳಿಗೆ 50 ರೂ. ಖರ್ಚು ಮಾಡಲು ಗತಿ ಇಲ್ಲವೇ? ಈಗಾಗಲೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರಕಾರ ಬರೆಯ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Key words:  government-illegal extortion- pockets - SSLC children – HD Kumaraswamy

Tags :

.