ಮೈಸೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧ : ಮುಖ್ಯಮಂತ್ರಿ ಸಿದ್ದರಾಮಯ್ಯ
ಅತಿಥಿಗಳ ಸೇವೆಯೇ ನಿಜವಾದ ಸಮಾಜ ಸೇವೆ: ಪ್ರವಾಸೋದ್ಯಮದ ಅಭಿವೃದ್ಧಿಗೆ ಹೋಟೆಲ್ ಉದ್ಯಮದ ಆತಿಥ್ಯ ಬಹಳ ಮುಖ್ಯ
ಮೈಸೂರು, ಡಿಸೆಂಬರ್ 23, 2023 (www.justkannada.in): ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬದ್ಧವಾಗಿದೆ. ಮೈಸೂರಿನ ಅಭಿವೃದ್ಧಿ, ಪ್ರವಾಸೋದ್ಯಮ, ಸಾಂಸ್ಕೃತಿಕ ನಗರವಾಗಿ ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ರಜತ ಮಹೋತ್ಸವವನ್ನು ಉದ್ಘಾಟಿಸಿರುವುದು ಸಂತೋಷ ತಂದಿದೆ. ಈ ಸಂಘ ಶತಮಾನೋತ್ಸವವನ್ನೂ ಆಚರಿಸಲಿ ಎಂದು ಶುಭ ಹಾರೈಸಿದ ಮುಖ್ಯಮಂತ್ರಿಗಳು ಹೋಟೆಲ್ ನವರಿಗೂ ನನಗೂ ಅವಿನಾಭಾವ ಸಂಬಂಧವಿದೆ. ನಾನು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಊಟಕ್ಕಾಗಿ ಹೋಟೆಲ್ ನ್ನೇ ನೆಚ್ಚಿಕೊಂಡಿದ್ದೆ. ನಾನ್ ವೆಜ್ ಊಟ ಹೆಚ್ಚು ಪ್ರಿಯವಾಗಿದ್ದು, ಅಂತಹ ಹೋಟೆಲ್ ಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದುದ್ದನ್ನು ಸ್ಮರಿಸಿಕೊಂಡರು.
ಅತಿಥಿ ದೇವೋಭವ : ಮೈಸೂರು ಪ್ರವಾಸೋದ್ಯಮದ ಕೇಂದ್ರ. ಅತಿಥಿ ದೇವೋ ಭವ ಎಂಬ ಭಾರತೀಯ ಸಂಸ್ಕೃತಿಯಂತೆ ಅತಿಥಿಗಳನ್ನು ದೇವರಂತೆ ಕಂಡು ಆತಿಥ್ಯ ನೀಡಬೇಕು. ತಲೆಮಾರುಗಳಿಂದ ಹೋಟೆಲ್ ಉದ್ಯಮವನ್ನು ಹಲವು ದಶಕಗಳ ನಡೆಸಿಕೊಂಡು ಬಂದ ಸಾಧಕರಿದ್ದಾರೆ. ಅತಿಥಿಗಳ ಸೇವೆಯೇ ನಿಜವಾದ ಸಮಾಜ ಸೇವೆ. ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಲು ಹಾಗೂ ಜನರ ಕೈಗೆ ದುಡ್ಡನ್ನು ನೀಡುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಪ್ರವಾಸಿಗರು ಹೆಚ್ಚಾದಾಗ ಅಲ್ಲಿನ ಹೋಟೆಲ್ ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ರಾಜ್ಯದ ಜಿಡಿಪಿ ಅಭಿವೃದ್ಧಿಯಾಗಲು ಸಹಕಾರಿ ಎಂದರು.
ಜನರ ಕೈಯಲ್ಲಿ ದುಡ್ಡಿದ್ದರೆ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ: ಜನರ ಕೈಯಲ್ಲಿ ದುಡ್ಡು ಇಲ್ಲದಿದ್ದರೆ ಜೀವನ ದುಸ್ತರವಾಗುತ್ತದೆ. ಆದ್ದರಿಂದ ಜನರ ಕೈಗೆ ದುಡ್ಡು ನೀಡಿದಾಗ, ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ. 1.16 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ತಲಾ 2000 ರೂ.ಗಳನ್ನು ನೀಡಲಾಗುತ್ತಿದೆ. ಮೈಸೂರನ್ನು ಪ್ರವಾಸಿ ಕೇಂದ್ರವಾಗಿಸಲು ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಮೈಸೂರಿನಲ್ಲಿ ಫಿಲ್ಮ ಸಿಟಿ ಸ್ಥಾಪಿಸಿ ಬಜೆಟ್ ನಲ್ಲಿ ಘೋಷಿಸಿದಂತೆ ಸ್ಥಾಪಿಸಲಾಗುವುದು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನ ಅಭಿವೃದ್ಧಿಯನ್ನು ಕೈಗೊಳ್ಳಲಾಗಿತ್ತು. ಈಗ ಪುನ: ನಮ್ಮ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.