HomeBreaking NewsLatest NewsPoliticsSportsCrimeCinema

ರಾಜ್ಯಪಾಲರ ನಡೆ ವಿರುದ್ದ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ: ಸಚಿವರು, ಶಾಸಕರು ಸೇರಿ ‘ಕೈ’ ಮುಖಂಡರು ಭಾಗಿ

03:06 PM Aug 19, 2024 IST | prashanth

ಮೈಸೂರು,ಆಗಸ್ಟ್,19,2024 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ  ನೀಡಿದ ಹಿನ್ನೆಲೆ ರಾಜ್ಯಪಾಲರ ನಡೆ ವಿರೋಧಿಸಿ ಸಿಎಂ ತವರಿನಲ್ಲಿ ಕೈ ನಾಯಕರ ಒಗ್ಗಟ್ಟು ಪ್ರದರ್ಶಿಸಿದ್ದು, ರಾಜ್ಯಪಾಲರ ನಡೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ  ಗಾಂಧಿ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ನಾಯಕರು, ಮುಖಂಡರು ರಾಜ್ಯಪಾರ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಸಭೆ ಬಳಿಕ ಡಿಸಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆಯಲ್ಲಿ ಕೈ ನಾಯಕರು ಸಾಗಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಶಾಸಕರಾದ ದರ್ಶನ್ ದೃವನಾರಾಯಣ್, ಹರೀಶ್ ಗೌಡ, ಅನಿಲ್ ಚಿಕ್ಕಮಾದು, ತನ್ವಿರ್ ಸೇಠ್, ರವಿಶಂಕರ್, ವಿಧಾನಪರಿಷತ್ ಸದಸ್ಯೆ ಉಮಾಶ್ರೀ, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿ ಹಲವರು ಭಾಗಿಯಾಗಿದ್ದರು.

ಪ್ರಾಮಾಣಿಕ ರಾಜಕಾರಣಿ, ಜನಾದೇಶ ಪಡೆದಿರುವ ಈ ಸರ್ಕಾರ ಕೆಡವಲು ಸಾಧ್ಯವಿಲ್ಲ- ಸಚಿವ ಮಹದೇವಪ್ಪ

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಮಾಡಿದ್ದಾರೆ. ಇದರ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದೆ. ಬಿಜೆಪಿ, ಜೆಡಿಎಸ್ ನವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಮುಂದಾಗಿದ್ದಾರೆ. ಮುಡಾ ತನ್ನ ತಪ್ಪನ್ನ ತಾನೇ ಒಪ್ಪಿಕೊಂಡಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.

ಯಾವುದೇ ಆಧಾರವಿಲ್ಲದೆ ಖಾಸಗಿ ವ್ಯಕ್ತಿಯ ದೂರಿಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿದ್ದೀರಾ. ವಾಮಮಾರ್ಗದ ಮೂಲಕ ಬಿಜೆಪಿ ಸರ್ಕಾರ ತರಲಿಕ್ಕೆ ಮುಂದಾಗಿದ್ದಾರೆ. ಅನಾಮಿಕ ಕಂಪನಿಗೆ 500 ಎಕರೆ ನೀಡಿರುವ ವಿಚಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ಮೇಲೆ ಲೋಕಾಯುಕ್ತ ವರದಿ ಇದೆ. ಇವರ ವಿರುದ್ಧ ನ್ಯಾಯಾಂಗ ತನಿಖೆಗೆ ಯಾಕೆ ಅನುಮತಿ ನೀಡಿಲ್ಲ. ಸಿದ್ದರಾಮಯ್ಯ ಈ ರಾಜ್ಯದ ಪ್ರಾಮಾಣಿಕ ರಾಜಕಾರಣಿ. ದಲಿತರ ಬಗ್ಗೆ ಮಾತನಾಡುವ ಬಿಜೆಪಿ ಎಷ್ಟು ಅನುದಾನ ದಲಿತ ಸಮುದಾಯಕ್ಕೆ ಕೊಟ್ಟಿದ್ದೀರಾ. ಪ್ರಾಮಾಣಿಕ ರಾಜಕಾರಣಿ, ಜನಾದೇಶ ಪಡೆದಿರುವ ಈ ಸರ್ಕಾರ ಕೆಡವೋದು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯಪಾಲರ ನಿರ್ಧಾರ ಸಂವಿಧಾನದ ಕಗ್ಗೊಲೆ- ಮರಿತಿಬ್ಬೇಗೌಡ

ಇದೇ ವೇಳೆ ಮಾತನಾಡಿದ ಮಾಜಿ ಎಂಎಲ್ ಸಿ ಮರಿತಿಬ್ಬೇಗೌಡ,  ರಾಜ್ಯದಲ್ಲಿ ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೆಡವಲು ರಾಜ್ಯಪಾಲರನ್ನ ಬಳಕೆ ಮಾಡಿಕೊಳ್ಳಲಾಗಿದೆ. ಇದು ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಪ್ಪು ಚುಕ್ಕೆ ತರಲು ಮಾಡಿರುವ ಕುತಂತ್ರ. ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ಸಿಎಂ ಧರ್ಮಪತ್ನಿಗೆ ನಿವೇಶನ ಹಂಚಿಕೆ ಆಗಿರೋದು ಬಿಜೆಪಿ ಅಧ್ಯಕ್ಷರಿದ್ದ ಅವಧಿಯಲ್ಲಿ. ನಿವೇಶನ ಹಂಚಿಕೆ ಮಾಡಿಸಲಿಕ್ಕೆ ಸಿಎಂ ರಾಜಕೀಯ ಪ್ರಭಾವ ಬಳಸಿಲ್ಲ. ಜೆಡಿಎಸ್ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ, ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ತನಿಖೆಯಾಗಿ ರಾಜ್ಯಪಾಲರಿಗೆ ವರದಿ ನೀಡಲಾಗಿದೆ. ಬಿಜೆಪಿ, ಜೆಡಿಎಸ್ ನಾಯಕರು ಚಾರಿತ್ರಹೀನರು ಎಂದು ಗುಡುಗಿದರು.

ರಾಜ್ಯಪಾಲರ ನಿರ್ಧಾರ ಸಂವಿಧಾನದ ಕಗ್ಗೊಲೆ. ಸಂವಿಧಾನ ಬಾಹಿರ ನಿರ್ಧಾರಗಳನ್ನ ನಾವು ಖಂಡಿಸಬೇಕು. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ.  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುರೆಯಲಿದ್ದಾರೆ ಎಂದು ಮರಿತಿಬ್ಬೇಗೌಡ ತಿಳಿಸಿದರು.

ರಾಜ್ಯಪಾಲರು ಕ್ರಮ ಸಂವಿಧಾನ ವಿರೋಧಿ- ಶಾಸಕ ತನ್ವಿರ್ ಸೇಠ್

ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವಿರ್ ಸೇಠ್, ಸಿದ್ದರಾಮಯ್ಯ ಯಾವುದೇ ವಿಚಾರದಲ್ಲಿ ಯಾರಿಗೂ ಶಿಫಾರಸ್ಸು ಮಾಡಿಲ್ಲ. ನಿವೇಶನ ಹಂಚಿಕೆ ಮಾಡುವ ವೇಳೆ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯರನ್ನ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರ ಕ್ರಮವನ್ನ ಪ್ರಶ್ನಿಸಿ ಹೈ ಕೋರ್ಟ್ ಮುಂದೆ ಹೋಗಬೇಕಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದಾರೆ. ನೀಚ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಸಿದ್ದರಾಮಯ್ಯನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

Key words:  Governor, congress, protest, Mysore

Tags :
congressGovernorMysore.protest
Next Article