ಸಿಎಂಗೆ ರಾಜ್ಯಪಾಲರ ನೋಟಿಸ್ : ಪ್ರತಿಭಟನೆ, ರಾಜಭವನ ಚಲೋಗೆ ಶೋಷಿತ ಸಮುದಾಯಗಳ ಮುಖಂಡರಿಂದ ನಿರ್ಧಾರ
ಮೈಸೂರು,ಆಗಸ್ಟ್,2, 2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ ರಾಜ್ಯಪಾಲರ ನಡೆಯನ್ನ ಖಂಡಿಸಿ ಆಗಸ್ಟ್ 5 ರಂದು ಪ್ರತಿಭಟನೆ, ರಾಜಭವನ ಚಲೋ ನಡೆಸಲು ಶೋಷಿತ ಸಮುದಾಯಗಳ ಮುಖಂಡರು ತೀರ್ಮಾನಿಸಿದ್ದಾರೆ.
ಇಂದು ಶೋಷಿತ ಸಮುದಾಯಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಒಬಿಸಿ ಮುಖಂಡ ರಾಮಚಂದ್ರಪ್ಪ, ದಸಂಸ ಮುಖಂಡ ಮಾವಳ್ಳಿ ಶಂಕರ್ ಸೇರಿ ಹಲವರು ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಮುಖಂಡ ಮಾವಳ್ಳಿ ಶಂಕರ್, ಮಳೆಯಿಂದ ಅನೇಕ ಜೀವಗಳು ಹೋಗಿವೆ. ಅನೇಕರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಆ ಎಲ್ಲಾ ಕುಟುಂಬಕ್ಕೆ ಸಾಂತ್ವನಹೇಳಬೇಕಿದೆ. ಸರ್ಕಾರದ ಜೊತೆ ನಾವು ನಿಲ್ಲಬೇಕಿದೆ. ಇದರ ಜೊತೆ ರಾಜಕೀಯ ಬೆಳವಣಿಗೆ ನಡೆದಿವೆ. ಸಿದ್ದರಾಮಯ್ಯ ಮೇಲೆ ದ್ವೇಷವನ್ನ ಇಟ್ಟುಕೊಂಡಿವೆ. ಸಿದ್ದರಾಮಯ್ಯ ಅವರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಪಾದಯಾತ್ರೆಯನ್ನಾದ್ರೂ ಮಾಡಲಿ. ತೀರ್ಥ ಯಾತ್ರೆಯನ್ನಾದ್ರೂ ಮಾಡಲಿ. ಕೇಂದ್ರ ಸರ್ಕಾರ ಈಗಾಗಲೇ ಅಖಾಡಕ್ಕಿಳಿದಿದೆ. ಸಿದ್ದರಾಮಯ್ಯನವರನ್ನ ಕೆಳಗಿಳಿಸಲು ಹೊರಟಿದ್ದಾರೆ. ರಾಜಭವನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಇಂತ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ನಡೆಯನ್ನ ಖಂಡಿಸುತ್ತೇವೆ. ಇದೇ 5 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಆ ನಂತರ ರಾಜಭವನ ಚಲೋ ಮಾಡ್ತೇವೆ. ಬಿವೈ ವಿಜಯೇಂದ್ರ ಪದೇ ಪದೇ ಆರೋಪ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಇದೆ ಅಂತಿದ್ದಾರೆ. ಯಡಿಯೂರಪ್ಪನವರನ್ನ ಕೆಳಗಿಳಿಸಿದ್ದು ಯಾರು? ವಿಜಯೇಂದ್ರ ಹಸ್ತಕ್ಷೇಪದಿಂದ ಕೆಳಗಿಳಿಸಿದ್ದು. ನಿಮ್ಮಿಂದ ನಿಮ್ಮ ತಂದೆ ಅಧಿಕಾರ ಕಳೆದುಕೊಂಡ್ರು. ಅದಕ್ಕೆ ಸಿದ್ದರಾಮಯ್ಯ ಮೇಲೆ ದ್ವೇಷ ಮಾಡ್ತಿದ್ದಾರೆ. ಹಾಗಾಗಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡ್ತೇವೆ. ಮೂಡ ಪ್ರಕರಣಕ್ಕೆ ಏಕಸದಸ್ಯ ಆಯೋಗ ರಚನೆಯಾಗಿದೆ. ಸಿದ್ದರಾಮಯ್ಯ ವಿರುದ್ಧ ನಡೆದಿರುವುದನ್ನ ಖಂಡಿಸುತ್ತೇವೆ. ನಾವು ಹೋರಾಟವನ್ನ ಮಾಡ್ತೇವೆ ಎಂದು ಬಿಜೆಪಿ ವಿರುದ್ಧ ಮಾವಳ್ಳಿ ಶಂಕರ್ ಹರಿಹಾಯ್ದರು.
ನಿರಪರಾಧಿಗಳನ್ನ ಅಪರಾಧಿ ಮಾಡಲು ಹೊರಟಿದ್ದಾರೆ- ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ನಿರಪರಾಧಿಗಳನ್ನ ಅಪರಾಧಿ ಮಾಡೋಕೆ ಹೊರಟಿದ್ದಾರೆ. ಮುಖ್ಯಮಂತ್ರಿಗಳಿಗೆ ನೇರ ಸಂಬಂಧವಿಲ್ಲ. ರೂಲ್ಸ್ ಪ್ರಕಾರ ಮಾಡಿ ಅಂದಿದ್ದಾರೆ. ಆದೆರೆ ಅವರನ್ನ ಸಿಲುಕಿಸುವ ಪ್ರಯತ್ನ ನಡೆದಿದೆ. ನಮ್ಮ ಸಂಘಟನೆ ಇದನ್ನ ಖಂಡಿಸುತ್ತದೆ. ಒಬ್ಬ ವ್ಯಕ್ತಿಯ ದೂರನ್ನ ರಾಜ್ಯಪಾಲರು ಪರಿಗಣಿಸ್ತಾರೆ. ಮುಖ್ಯಮಂತ್ರಿಗಳಿಗೆ ನೊಟೀಸ್ ಕೊಡ್ತಾರೆ. ಇತ್ತ ಬಿಜೆಪಿ,ಜೆಡಿಎಸ್ ಪಾದಯಾತ್ರೆ ಮಾಡ್ತಿದ್ದಾರೆ. ಅವರು ಮಾಡ್ತಿರೋದು ಪಾಪಯಾತ್ರೆ. ಸಿದ್ದರಾಮಯ್ಯನವರನ್ನ ಎಲ್ಲರು ಉಳಿಸಿಕೊಳ್ಳಬೇಕು. ಅವರ ಮೇಲೆ ಖ್ಯಾತೆ ತೆಗೆಯೋದಲ್ಲ. ಪ್ರವಾಹದಲ್ಲಿ ಗುಡ್ಡ ಕುಸಿಯುತ್ತಿವೆ. ಜನರು ಸಾಯ್ತಿದ್ದಾರೆ. ಅದರ ಕಡೆ ಗಮನಹರಿಸಿ. ನೀವು ಪಾದಯಾತ್ರೆ ಮಾಡಿದ್ರೆ ನಾವು ಸುಮ್ಮನಿರಲ್ಲ. ನಾವು ತಿರುಗಿ ಬೀಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಅನಂತ್ ನಾಯ್ಕ ಮಾತನಾಡಿ, ಇಡೀ ರಾಜಭವನ ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರವನ್ನ ಮುಗಿಸೋ ಪ್ರಯತ್ನ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಅಂತ ಕೆಲಸ ಮಾಡ್ತಿದೆ. ಬಿಜೆಪಿಗೆ ಸಂಸದೀಯ ಪದ್ಧತಿ ಬೇಕಿಲ್ಲ. ಇವರ ನಡವಳಿಕೆ ನೋಡಿದ್ರೆ ಏನನ್ನಿಸುತ್ತೆ. ಸಿಬು ಸೊರೇನ್ ಅವರನ್ನ ಜೈಲಿಗೆ ಕಳುಹಿಸಿದರು. ಅರವಿಂದ ಕೇಜ್ರೀವಾಲ್ ಜೈಲಿಗೆ ಹಾಕಿದ್ರು. ಈಗ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡ್ತಿದ್ದಾರೆ. ಮೂಡಾ ಪ್ರಕರಣದ ಮೇಲೆ ತನಿಖೆ ನಡೆದಿದೆ. ತನಿಖಾ ವರದಿ ಬರಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ಅದಕ್ಕೂ ಮೊದಲೇ ಅವರನ್ನ ಹೊಸಕಿಹಾಕುವ ಕೆಲಸ ಮಾಡ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ನೋಡ್ತಿದ್ದಾರೆ. ಪ್ರಕರಣ ದುರುಪಯೋಗ ಮಾಡಿಕೊಳ್ತಿದ್ದಾರೆ. ಆದರೆ ಶೋಷಿತ ಸಮುದಾಯಗಳು ಸಿಎಂ ಬೆನ್ನಿಗೆ ನಿಲ್ಲಲ್ಲಿವೆ. ತಕ್ಷಣ ಸಿಎಂ ಸಿದ್ದರಾಮಯ್ಯರ ತೇಜೋವಧೆ ನಿಲ್ಲಿಸಬೇಕು. ಇಲ್ಲವೇ ನಾವು ಸುಮ್ಮನಿರುವುದಿಲ್ಲ. ನಾವು ಆಗಸ್ಟ್ 5 ರಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೇವೆ. ರಾಜ್ಯಪಾಲರೇ ನೀವು ಶೋಷಿತ ಸಮುದಾಯದವರು. ಸಂವಿಧಾನದ ಮೇಲೆ ನಿಮಗೆ ಗೌರವವಿರಲಿ. ಕ್ಯಾಬಿನೆಟ್ ನಿಮಗೆ ಉತ್ತರ ಕಳುಹಿಸಿದೆ. ಅದನ್ನಪರಿಗಣಿಸಿ ನೀವು ಅಂತ್ಯ ಹಾಡಬೇಕು. ಮುಂದುವರಿದು ಹೋಗಿದ್ದೇ ಆದ್ರೆ ನಿಮಗೆ ಸಂವಿಧಾನದ ಮೇಲೆ ಗೌರವವಿಲ್ಲ. ಆಗಸ್ಟ್ 7 ರಂದು ನಾವು ರಾಜಭವನ ಮುತ್ತಿಗೆ ಹಾಕ್ತೇವೆ ಎಂದು ಎಚ್ಚರಿಕೆ ನೀಡಿದರು.
ಕುರುಬ ಮುಖಂಡ ರಾಮಚಂದ್ರಪ್ಪ ಮಾತನಾಡಿ, ರಾಜ್ಯಪಾಲರು ಒಂದು ನಿರ್ಧಾರಕ್ಕೆ ಬರಬೇಕು. ಇಲ್ಲವೇ ಬೆಂಗಳೂರಿನಲ್ಲಿ ಹೋರಾಟ ಮಾಡ್ತೇವೆ. ಲಕ್ಷಾಂತರ ಜನ ಪ್ರತಿಭಟನೆ ಮಾಡ್ತೇವೆ. ಸಿಎಂಗೆ ತೊಂದರೆ ಕೊಡೋದಾದ್ರೆ ನಾವು ಸುಮ್ಮನಿರಲ್ಲ. ದೀನದಲಿತರ ಪರ ಕಾರ್ಯಕ್ರಮ ಕೊಟ್ಟವರು. ಅವರ ಪರವಾಗಿ ನಾವು ನಿಲ್ತೇವೆ. ರಾಜಭವನ ಚಲೋ ಮಾಡ್ತೇವೆ. ಅದರ ದಿನಾಂಕವನ್ನ ತಿಳಿಸುತ್ತೇವೆ ಎಂದರು.
Key words: Governor, notice, CM, Protest, exploited community