HomeBreaking NewsLatest NewsPoliticsSportsCrimeCinema

ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ತಡೆಹಿಡಿಯವಂತೆ KSOU ಗೆ ಸರ್ಕಾರ ನಿರ್ದೇಶನ.

10:50 AM Oct 30, 2023 IST | prashanth

ಬೆಂಗಳೂರು,ಅಕ್ಟೋಬರ್,30,2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಪ್ರಗತಿಯಲ್ಲಿದ್ದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ತಡೆಹಿಡಿಯಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ದಿನಾಂಕ 16.08.2023 ರಂದು 7 ಪ್ರಾಧ್ಯಾಪಕ (Professor) ಹಾಗೂ 25 ಸಹಪ್ರಾಧ್ಯಾಪಕ (Associate professor) ಹುದ್ದೆಯ ನೇರ ನೇಮಕಾತಿಗೆ ಹಾಗೂ ಹೈದರಾಬಾದ್- ಕರ್ನಾಟಕ ಮೀಸಲಾತಿ ನಿಯಮ 371(ಜೆ) ರನ್ವಯ 32 ವಿವಿಧ ಬೋಧಕೇತರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವು ಬೋಧಕ ಹುದ್ದೆಗೆ ಸೆಪ್ಟೆಂಬರ್ 27 ಹಾಗೂ ಬೋಧಕೇತರ ಹುದ್ದೆಗೆ ಸೆಪ್ಟೆಂಬರ್ 30 ಮುಗಿದಿತ್ತು.

ಈ ಸಂಬಂಧ ಕೆಎಸ್ ಒಯುಗೆ ಸೂಚನೆ ನೀಡಿರುವ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ(ಉನ್ನತ ಶಿಕ್ಷಣ ಇಲಾಖೆ), ಕರಾಮುವಿಯಲ್ಲಿ ಈ ಹಿಂದೆ ಹಾಗೂ ಪ್ರಸ್ತುತ ವಿವಿಧ ಮೀಸಲಾತಿಯಡಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ತಾತ್ಕಾಲಿಕ ಹಾಗೂ ಖಾಯಂ ನೇಮಕಾತಿ ಮಾಡಿಕೊಂಡಿರುವ ಹಾಗೂ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ ಉಲ್ಲಂಘನೆಯಾಗಿರುವ ಕುರಿತು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ದಾಖಲಾಗಿತ್ತು. ಸದರಿ ಸಮಿತಿಯ ದಿನಾಂಕ 5.10.2023 ರ ಸಭೆಯಲ್ಲಿ ದೂರಿನ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ, ಈ ಕೆಳಕಂಡಂತೆ ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿದೆ.

"ಕರಾಮುವಿಯಲ್ಲಿ ವಿವಿಧ ಮೀಸಲಾತಿಯಡಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿಯನ್ನು ತಾತ್ಕಾಲಿಕ ಹಾಗೂ ಖಾಯಂ ಆಗಿ ಭರ್ತಿ ಮಾಡಿಕೊಂಡಿರುವ ಹಾಗೂ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯಲ್ಲಿ ಮೀಸಲಾತಿ ಹಾಗೂ ರೋಸ್ಟರ್ ಬಿಂದುಗಳನ್ನು ನಿಯಮಾನುಸಾರ ಗುರುತಿಸಿರುವ ಕುರಿತು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆ ಹಾಗೂ ಸಿಆಸು (ಹೈ-ಕ ಮೀಸಲಾತಿ) ಇಲಾಖೆಗಳಿಂದ ಅಧಿಕೃತವಾಗಿ ಅಭಿಪ್ರಾಯ/ಸಹಮತಿ ಪಡೆದಿರುವ ಕುರಿತು ಪರಿಶೀಲಿಸಿ, ನಿಯಮ ಬದ್ಧವಾಗಿದೆಯೆಂದು ಅನುಮೋದನೆ ನೀಡುವವರೆಗೂ ವಿಶ್ವವಿದ್ಯಾಲಯವು ಹಾಲಿ ಕೈಕೊಂಡಿರುವ ಎಲ್ಲಾ ಬೋಧಕ ಮತ್ತು ಬೋಧಕೇತರ (ತಾತ್ಕಾಲಿಕ/ಖಾಯಂ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ನಿರ್ದೇಶಿಸಿದೆ.

ತಾತ್ಕಾಲಿಕ ಹಾಗೂ ಖಾಯಂ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಮೂರು ದಿನದ ಒಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ವಿವಿಧ ಅನುಬಂಧಗಳ(1 ರಿಂದ 12)ನಮೂನೆಯನ್ನು ನೀಡಿರುತ್ತಾರೆ. ಇವುಗಳಲ್ಲಿ ಮಂಜೂರಾದ ಹುದ್ದೆಗಳು ಭರ್ತಿಯಾಗಿರುವ ಹುದ್ದೆಗಳು (ನಿಯೋಜನೆ, ಗುತ್ತಿಗೆ ಹಾಗೂ ಹೊರಗುತ್ತಿಗೆ), ವಿವಿಧ ಬೋಧಕ ಹುದ್ದೆಗಳನ್ನು ಸೃಜನೇ ಮಾಡಿರುವ ಸರ್ಕಾರಿ ಆದೇಶಗಳು, ಮೈಸೂರು ವಿವಿಯಿಂದ ವರ್ಗಾವಣೆಗೊಂಡ ಹುದ್ದೆಗಳ ವಿವರ, ಪ್ರಸ್ತಾಪಿತ ಹುದ್ದೆಗಳು ಯಾವ ವಿಭಾಗ ಅಥವಾ ವಿಷಯಕ್ಕೆ ಸೇರಿದ ಹುದ್ದೆಗಳು ಎಂಬ ಸ್ಪಷ್ಟ ಮಾಹಿತಿ, ವಿವಿಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರತಿ, ವಿವಿಯಲ್ಲಿ ನಡೆಸಲಾಗುತ್ತಿರುವ ಕೋರ್ಸ್ ಗಳ ವಿವರ, 2021- 22 ಹಾಗೂ 22-23ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳ ವಿವರ, ಪ್ರತಿ ಕೋರ್ಸ್ ನಲ್ಲಿರುವ ಕಾರ್ಯಭಾರದ ವಿವರ, ಪ್ರಸ್ತಾಪಿತ ಹುದ್ದೆಗಳಿಗೆ ಅಗತ್ಯವಿರುವ ಅನುದಾನದ ಮಾಹಿತಿ, ಪ್ರಸ್ತುತ ಖಾಲಿ ಇರುವ ಹುದ್ದೆಗಳ ಕಾರ್ಯಭಾರವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದರ ವಿವರ, ಪ್ರಸ್ತಾಪಿತ ಹುದ್ದೆಗಳ ಭರ್ತಿಗೆ ತಗಲುವ ವಾರ್ಷಿಕ ಹಾಗೂ ಮಾಸಿಕ ಅಂದಾಜು ವೆಚ್ಚದ ವಿವರ ಹಾಗೂ ಹುದ್ದೆವಾರು ಹಾಗೂ ವಿಷಯವಾರು ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿಯನ್ನು ಮೂರು ದಿನಗಳ ಒಳಗಡೆ ಒದಗಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಪ್ರಗತಿಯಲ್ಲಿದ್ದ ಬೋಧಕ ಹುದ್ದೆಗಳ ಸಹಪ್ರಾಧ್ಯಾಪಕರ ನೇಮಕಾತಿಯಲ್ಲಿ ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯದ ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಮೀಸಲಾತಿಗೆ ನಿಗದಿಪಡಿಸಿ ಇತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸದ ಹಾಗೆ ಆಗಿತ್ತು ಹಾಗೂ ಸರ್ಕಾರದಿಂದ ಅನುಮತಿ ಪಡೆದ ವಿಷಯವಾರು ಹುದ್ದೆಗಳನ್ನು ಇತರ ವಿಷಯಗಳಿಗೆ ಸೂಕ್ತ ಕಾರಣವಿಲ್ಲದೆ ವರ್ಗಾಯಿಸಿರುವ ಬಗ್ಗೆಯೂ ಹಲವು ಆಕಾಂಕ್ಷಿಗಳಿಂದ ದೂರು ಕೇಳು ಬಂದಿತ್ತು.

Key words: Govt- directs -KSOU – stay- direct recruitment- process

Tags :
Govt- directs -KSOU – stay- direct recruitment- process
Next Article