For the best experience, open
https://m.justkannada.in
on your mobile browser.

ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ನ್ಯಾಯಾಧೀಶ ಜಿ.ಎಸ್ ಸಂಗ್ರೇಶಿ ನೇಮಕ

10:53 AM Jun 29, 2024 IST | prashanth
ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ನ್ಯಾಯಾಧೀಶ ಜಿ ಎಸ್ ಸಂಗ್ರೇಶಿ ನೇಮಕ

ಬೆಂಗಳೂರು,ಜೂನ್,29,2024 (www.justkannada.in): ನ್ಯಾಯಾಧೀಶ ಜಿ ಎಸ್ ಸಂಗ್ರೇಶಿಯವರನ್ನು ರಾಜ್ಯ ಚುನಾವಣಾ ಆಯೋಗದ ಆಯುಕ್ತರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿ ಎಸ್ ಸಂಗ್ರೇಶಿಯವರ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುದೀರ್ಘ 30 ವರ್ಷದ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಜಿ ಎಸ್ ಸಂಗ್ರೇಶಿ  ಅವರು ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದರು. ನಂತರ ಅವರು ರಾಜ್ಯ ಕಾನೂನು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಜಿ ಎಸ್ ಸಂಗ್ರೇಶಿ ಅವರು ಮಾನವೀಯ ಕಳಕಳಿಯುಳ್ಳ ನ್ಯಾಯಾಧೀಶರು ಅಂತಲೇ ಜನಜನಿತರಾಗಿದ್ದರು. ಇದರ ಜೊತೆಗೆ ಶಿಸ್ತಿನ ಸಿಪಾಯಿಯಾಗಿದ್ದರು. 10 ತಿಂಗಳ ಹಿಂದೆ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾಗಿ ನಿಯೋಜನೆಗೊಂಡಿದ್ದರು. ಇವರ ಕಾರ್ಯಾವಧಿಯಲ್ಲಿ ಜನರಿಗೆ ತ್ವರಿತಗತಿಯಲ್ಲಿ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದರು. ಅದರಲ್ಲೂ ಇವರ ಕಾರ್ಯಾವಧಿಯಲ್ಲಿ ತಮ್ಮ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರ ನಡುವೆ ಸಮನ್ವಯತೆ ಸೌಹಾರ್ದಯೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಶಿಸ್ತಿನ ಸಿಪಾಯಿಯಾಗಿದ್ದ ಜಿ ಎಸ್ ಸಂಗ್ರೇಶಿಯವರು ಸಮಯ ಪರಿಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ತಾವು ಮಾತ್ರವಲ್ಲ ತಮ್ಮ ನ್ಯಾಯಾಂಗ ಸಿಬ್ಬಂದಿಯಲ್ಲೂ ಶಿಸ್ತು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಬಡವರು ನೊಂದವರಿಗೆ ಸದಾ ಮಿಡಿಯುವ ಮನಸನ್ನು ಹೊಂದಿದ್ದ ಅವರು ತಮ್ಮ ಸೇವೆಯ 10 ತಿಂಗಳ ಅವಧಿಯಲ್ಲಿ ಲೋಕ ಅದಾಲತ್ ಮೂಲಕ ನೂರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಸಣ್ಣ ಪುಟ್ಟ ಮನಸ್ತಾಪದಿಂದ ದೂರಾಗುತ್ತಿದ್ದ ದಂಪತಿ ಜೊತೆ ಖುದ್ದು ಮಾತನಾಡಿ ಅವರ ಮನವೊಲಿಸಿ ಅವರನ್ನು ಒಂದು ಮಾಡಿ ಹೊಸ ಬಾಳಿಗೆ ಮುನ್ನುಡಿ ಬರೆದಿದ್ದು ವಿಶೇಷವಾಗಿತ್ತು. ನ್ಯಾಯಾಲಯ ಸದಾ ಜನರ ಸೇವೆಗಿರುವ ದೇವಾಲಯ ಎಂದು ನಂಬಿದ್ದ ಅವರು ನ್ಯಾಯಾಲಯದಲ್ಲಿ ಜನಸ್ನೇಹಿ ವಾತಾವರಣವನ್ನು ಮೂಡಿಸಿದ್ದರು.

ಹಿಂದೆ 2008ರಲ್ಲಿ ಜಿ ಎಸ್ ಸಂಗ್ರೇಶಿಯವರು ಮೈಸೂರು ಜಿಲ್ಲೆಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ನಂತರ ತುಮಕೂರು, ಗದಗ್, ಕೊಡಗು ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು.

ಇದಾದ  ನಂತರ ರಾಜ್ಯದ ಕಾನೂನು ಕಾರ್ಯದರ್ಶಿಯಾಗಿದ್ದ ಜಿ ಎಸ್ ಸಂಗ್ರೇಶಿ ಅವರನ್ನು ಹೆಚ್ಚುವರಿಯಾಗಿ ರಾಜ್ಯ ಅಭಿಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಪ್ರಸ್ತುತ ಅವರು ನಿರ್ವಹಿಸುತ್ತಿದ್ದ ರಾಜ್ಯ ಕಾನೂನು ಕಾರ್ಯದರ್ಶಿ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಈ ಜವಾಬ್ದಾರಿಯನ್ನು ಸಹಾ ಅವರಿಗೆ ನೀಡಲಾಗಿತ್ತು. ಹೆಚ್ಚುವರಿಯಾಗಿ  ರಾಜ್ಯ ಅಭಿಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಜಿ ಎಸ್ ಸಂಗ್ರೇಶಿ ಅವರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಈ ಹುದ್ದೆ ಅಲಂಕರಿಸಿದ ಮೊದಲಿಗರು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಚಿಕ್ಕಕುಂಬಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ್ದ ಜಿ ಎಸ್ ಸಂಗ್ರೇಶಿ ಗ್ರಾಮೀಣ ಪ್ರದೇಶದ ಜನರು, ಬಡವರು ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.

ಇದೀಗ ಇವರ ಜನಪರ ಕಾಳಜಿ, ಸಮಯ ಪರಿಪಾಲನೆ, ಶಿಸ್ತು ಅವರ ಬದ್ದತೆಗೆ ಮಾನ್ಯತೆ ನೀಡಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.

Key words: GS Sangreshi, appointed, State, Election, Commissioner

Tags :

.