For the best experience, open
https://m.justkannada.in
on your mobile browser.

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

06:10 PM Aug 23, 2024 IST | prashanth
ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ  ಸಚಿವ ಡಾ  ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು ಆಗಸ್ಟ್ 23,2024 (www.justkannada.in):  ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟೆನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ  ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್  ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರರಾದ ಡಾ. ಸುಜಾತ ರಾಥೋಡ್ ಅವರಿಗೆ  ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು/ಪಾಲುದಾರರನ್ನು ಸಂಪರ್ಕಿಸಿ  ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದರು.

ಡಾ. ರಾಥೋಡ್ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲಾ ನಿರ್ದೇಶಕರುಗಳು, ಸರ್ಕಾರಿ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿರ್ದೇಶನ ನೀಡಿದರು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯರ ಸುರಕ್ಷತೆಗಾಗಿ ವೈದ್ಯಕೀಯ ಸಮುದಾಯದ ಸಲಹೆ ಸೂಚನೆಗಳಂತೆ ರಾಜ್ಯ ಸರ್ಕಾರವು ಶೀಘ್ರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ಮಾರ್ಗಸೂಚಿಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತವೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಮಾಧ್ಯಮಕ್ಕೆ ತಿಳಿಸಿದರು.

ಕೊಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ, ಸ್ವತಃ  ವೈದ್ಯರಾದ ಡಾ. ಪಾಟೀಲ್ ಅವರು ವೃತ್ತಿಪರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ, ಮತ್ತು ಮಹಿಳಾ ವೈದ್ಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನುತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Key words: Guidelines, safety, women doctors, Minister,Dr. Sharan Prakash Patil

Tags :

.