ಡಿ.ದೇವರಾಜು ಅರಸು ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಹೆಚ್.ಎ ವೆಂಕಟೇಶ್ ಒತ್ತಾಯ.
ಮೈಸೂರು,ಜನವರಿ,25,2024(www.justkannada.in): ಶೋಷಿತ ಸಮುದಾಯದ ನಾಯಕ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ದೇಶದಲ್ಲೇ ಅತ್ಯಂತ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡುವಂತೆ ಮೈಲಾಕ್ ಮಾಜಿ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿರುವ ಕ್ರಮ ಸ್ವಾಗತಾರ್ಹವಾಗಿದೆ ಮತ್ತು ಅದನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತಿದ್ದೇನೆ. ಬಿಹಾರದಲ್ಲಿ ಸಾಮಾಜಿಕ ಬದಲಾವಣೆಗಾಗಿ ಮದ್ಯ ಮಾರಾಟ ನಿಷೇಧ ಹೇರಿದ್ದ ಕರ್ಪೂರಿ ಠಾಕೂರ್ ಅವರಿಗೆ ಪರಮೋಚ್ಛ ಪ್ರಶಸ್ತಿ ನೀಡಿದ್ದು ಸಂತೋಷವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉಳುವವನೇ ಭೂ ಒಡೆಯ, ಜೀತ ಪದ್ಧತಿ ನಿಷೇಧ, ಮಲಹೊರುವ ಪದ್ಧತಿ ನಿಷೇಧ ಜಾರಿಗೆ ತಂದಿರುವುದು. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಿ ಸೂಕ್ಷ್ಮ, ಅತಿ ಸೂಕ್ಷ್ಮಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯ ಸಿಗುವಂತೆ ಮಾಡಿದ ಡಿ.ದೇವರಾಜ ಅರಸು ಅವರನ್ನು ಕೇಂದ್ರಸರ್ಕಾರ ಪರಿಗಣಿಸಿ ಭಾರತರತ್ನ ನೀಡುವಂತೆ ಕೋರಿದ್ದಾರೆ.
ಡಿ.ದೇವರಾಜ ಅರಸು ಅಂದರೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಇಡೀ ದೇಶದ ಗಮನ ಸೆಳೆದ ಶೋಷಿತ ಸಮುದಾಯಗಳ ನಾಯಕರಾಗಿದ್ದಾರೆ. ಇವರಿಗೆ ಮರಣೋತ್ತರ ಪ್ರಶಸ್ತಿ ನೀಡುವಂತೆ ರಾಜ್ಯಸರ್ಕಾರದ ಪರವಾಗಿ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರು, ಸಂಸದರು ಕೂಡಲೇ ಡಿ.ದೇವರಾಜ ಅರಸು ಅವರಿಗೂ ಭಾರತರತ್ನ ಪ್ರಶಸ್ತಿ ನೀಡುವಂತೆ ಮನವಿ ಪತ್ರ ಸಲ್ಲಿಸುವ ಜತೆಗೆ ಒತ್ತಡ ತರಬೇಕು ಎಂದು ಎಚ್.ಎ.ವೆಂಕಟೇಶ್ ಆಗ್ರಹಿಸಿದ್ದಾರೆ.
Key words: H.A Venkatesh-insists - award -Bharat Ratna -D.Devaraju Arasu.