ಹರ್ ಘರ್ ಜಲ್ ಯೋಜನೆಯಡಿ 2024ರೊಳಗೆ ನಲ್ಲಿ ಸಂಪರ್ಕ ಅಳವಡಿಸುವ ಕಾರ್ಯ ಪೂರ್ಣ- ಎ.ಎಸ್. ರಂಜಿತ್ ಕುಮಾರ್
ಮೈಸೂರು,ನವೆಂಬರ್,7,2023(www.justkannada.in): ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ನೀರು ತಪ್ಪಿಸಿ ಶುದ್ಧ ಕುಡಿಯುವ ನೀರನ್ನು ಪ್ರತಿ ಮನೆಗೂ ಒದಗಿಸಲು ಆರಂಭಿಸಿರುವ ಜಲಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್(ಮನೆ ಮನೆಗೂ ಗಂಗೆ) ಮುಂದಿನ 2024ರ ಒಳಗೆ ನೀರಿನ ನಲ್ಲಿ ಸಂಪರ್ಕ ಅಳವಡಿಸುವ ಕಾರ್ಯ ಪೂರ್ಣವಾಗಲಿದೆ. 2021ರಲ್ಲಿ ನಂಜನಗೂಡು, ತಿ.ನರಸೀಪುರ, ಮೈಸೂರು ತಾಲ್ಲೂಕಿನ ಫೈಲಟ್ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಂಡಿದ್ದ ಈ ಯೋಜನೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಿದ ಮೇಲೆ ಕಾಮಗಾರಿಗಳು ಭರದಿಂದ ಸಾಗಿದೆ. ಜಲಮೂಲವನ್ನು ಬಳಸಿಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭಿಸಿರುವ ಕಾರಣ ಜಲ್‌ಜೀವನ್ ಮಿಷನ್ ನಡಿ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದಾಗಿ ನೀರು ಮಿತವ್ಯಯವಾಗುವ ಜತೆಗೆ ನೀರಿನ ತೆರಿಗೆ ವಸೂಲಿಗೂ ಕಾರಣವಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್ ಕುಮಾರ್ ವಿವರಣೆ ನೀಡಿದರು.
ಜಿಲ್ಲೆಯಲ್ಲಿ 1909 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದು, ೯೦೩ ಕಾಮಗಾರಿಗಳು ಮುಕ್ತಾಯವಾಗಿವೆ. ನಾಲ್ಕು ಹಂತದಲ್ಲಿ ನಡೆಯುತ್ತಿರುವುದರಿಂದ ಮುಂದಿನ 2024ಕ್ಕೆ ಮುಗಿಸುವುದಕ್ಕೆ ಬೇಕಾದ ಪ್ಲಾನ್ ಮಾಡಲಾಗಿದೆ. ಮನೆ ಮನೆಗೆ ಗಂಗೆ ಹೆಸರನಡಿ ಪ್ರತಿಯೊಂದು ಮನೆಗೂ ಪೈಪ್ ಲೈನ್ ಮೂಲಕ ನಲ್ಲಿಸಂಪರ್ಕ,ಮೀಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ೩,೨೧,೭೧೨ ಮನೆಗಳಿದ್ದು,ಈಗಾಗಲೇ ೨,೦,೭೦೭೩ ಮನೆಗಳಿಗೆ ಸಂಪರ್ಕ ಕಲ್ಪಿಸಿ ಶೇ.೮೦ರಷ್ಟು ಪ್ರಗತಿಯಾಗಿದೆ. ಮುಂದಿನ ೨೦೨೪ರ ಒಳಗೆ ಪೂರ್ಣಗೊಳಿಸಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವಂತೆ ಗುರಿ ಹೊಂದಲಾಗಿದೆ. ಜಿಲ್ಲೆಯ ೧೧೯೮ ಹಳ್ಳಿಗಳಲ್ಲಿ ೨೫೭ ಗ್ರಾಮಗಳಿಗೆ ಪೂರ್ಣ ನಲ್ಲಿ ಸಂಪರ್ಕ ಕಲ್ಪಿಸಿ ಗ್ರಾಮಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದು ಎ.ಎಸ್.ರಂಜಿತ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ 45 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 38 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಏಳು ಯೋಜನೆಗಳಿಗೆ ಸರ್ಕಾರದ ಅನುಮತಿ ಕಾಯಲಾಗುತ್ತಿದೆ. 38 ಯೋಜನೆಗಳಲ್ಲಿ 16 ಯೋಜನೆಗಳು ಪೂರ್ಣವಾಗಿದ್ದು, 15 ಯೋಜನೆಗಳು ಪ್ರಗತಿಯಲ್ಲಿವೆ. ನಾಲ್ಕು ಯೋಜನೆಗಳು ಕಾಮಗಾರಿ ಮಾಡಬೇಕಿದೆ. ಒಂದು ಯೋಜನೆ ಡಿಪಿಆರ್ ಅಂತಿಮ ಹಂತದಲ್ಲಿದೆ. ಒಂದು ಯೋಜನೆಯು ಗುತ್ತಿಗೆದಾರರು ನಿಲ್ಲಿಸಿದ್ದ ಮತ್ತೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ತಾಂಡವಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಆರು ತಿಂಗಳ ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಲಾಗಿದೆ. ಎಚ್.ಡಿ.ಕೋಟೆ-೧೬, ಹುಣಸೂರು-೨೮, ಕೆ.ಆರ್.ನಗರ-೨೬, ವರುಣ-೩೧, ಚಾಮುಂಡೇಶ್ವರಿ-೨, ನಂಜನಗೂಡು-೯, ಪಿರಿಯಾಪಟ್ಟಣ-೧೨, ತಿ.ನರಸೀಪುರ-೧೭ ಸೇರಿ ೧೪೧ ಗ್ರಾಮಗಳನ್ನು ಗುರುತಿಸಲಾಗಿದೆ. ಈಗಾಗಲೇ ಒಂದು ಕೋಟಿ ರೂ.ಅನುದಾನವವನ್ನು ಬಿಡುಗಡೆ ಮಾಡಲಾಗಿದೆ. ಮತ್ತೆ 2 ಕೋಟಿ ರೂ. ಕ್ರಿಯಾಯೋಜನೆ ರೂಪಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ತುರ್ತು ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ ಎಂದು ಎ.ಎಸ್.ರಂಜಿತ್ ಕುಮಾರ್ ಹೇಳಿದರು.
ಬೋರ್ ವೆಲ್ ಕುಡಿಯುವ ನೀರು ಕುಡಿಯುವುದನ್ನು ತಪ್ಪಿಸಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ಮುಖ್ಯವಾಗಿರುವ ಕಾರಣ ೧೨೬೪ ಶಾಲೆಗಳು, ೧೯೫೫ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ೬೪೯ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ೬೫ ದುರಸ್ತಿಯಲ್ಲಿವೆ. ಉಳಿದ ಘಟಕಗಳು ನಿರ್ವಹಣೆಯಲ್ಲಿರುವ ಕಾರಣ ಸಾರ್ವಜನಿಕರು ನಾಣ್ಯ ಹಾಕಿ ನೀರು ಪಡೆಯುತ್ತಾರೆ. ಇದರಿಂದಾಗಿ ಎಲ್ಲಿಯೂ ಕಲುಷಿತ ನೀರು ಸೇವನೆ ಮಾಡಿ ಅನಾಹುತ ಸಂಭವಿಸಿದ ಪ್ರಕರಣಗಳು ವರದಿಯಾಗದಂತೆ ಕ್ರಮಕೈಗೊಂಡಿದ್ದೇವೆ
ಜಿಲ್ಲೆಯಲ್ಲಿ ೧೯೬೭ ಓವರ್ ಹೆಡ್ ಟ್ಯಾಂಕ್, ೨೨೭೨ ತೊಂಬೆಗಳು ಇದ್ದು, ೧೧೮೦೫ ಬೋರ್ ವೆಲ್ ಗಳು ಇವೆ. ೧೩೪ ಬೋರ್ ವೆಲ್ ಗಳ ಮಟ್ಟ ಕುಸಿತವಾಗಿದ್ದರೆ, ೨೧ ಸಂಪೂರ್ಣ ಅಂತರ್ಜಲ ಕುಸಿದು ಬತ್ತಿ ಹೋಗಿದೆ. ಒಂದೊಂದು ಊರಿನಲ್ಲಿ ಐದು ಜನ ಮಹಿಳೆಯರನ್ನು ಗುರುತಿಸಿ ಎಫ್ ಟಿಕೆ ಕಿಟ್ ಕೊಡಲಾಗಿದೆ. ಈ ಮಹಿಳೆಯರು ಬೋರ್ ವೆಲ್‌ನಲ್ಲಿ ನೀರನ್ನು ಸಂಗ್ರಹಿಸಿ ವರದಿ ಕೊಡುತ್ತಾರೆ. ಸುಮಾರು ೫೯೦೦ ಮಹಿಳೆಯರನ್ನು ನೇಮಿಸಲಾಗಿದೆ. ಏನಾದರೂ ನೀರು ಕುಡಿಯುವುದಕ್ಕೆ ಯೋಗ್ಯವಲ್ಲವೆಂದರೆ ಅದನ್ನು ಮುಚ್ಚಲಾಗುವುದು ಎಂದರು.
ಗುತ್ತಿಗೆದಾರರು ಕೆಲಸ ಮುಗಿಸಿದ ತಕ್ಷಣವೇ ಬಿಲ್ ಮಂಜೂರು ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕ್ರಿಯಾಯೋಜನೆ ರೂಪಿಸಿರುವುದಕ್ಕಿಂತ ಹೆಚ್ಚು ಪೈಪ್ ಲೈನ್ ಮಾಡಿರುವುದರಿಂದ ಹೆಚ್ಚುವರಿ ಬಿಲ್ ಕೊಡಬೇಕಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ಮುಗಿದಿದ್ದರೂ ಹೆಚ್ಚುವರಿ ಮನೆಗಳಿಗೆ ಸಂಪರ್ಕ ಕಲ್ಪಿಸುವಂತೆ ಹೇಳಲಾಗುತ್ತಿದೆ. ಆದರೆ, ಗುತ್ತಿಗೆದಾರರು ಹೆಚ್ಚುವರಿ ಮಾಡಲು ಹಿಂದೇಟು ಹಾಕುವ ಕಾರಣ ಸಮಸ್ಯೆಯಾಗಿದೆ. ಕೂಡಲೇ ಇಂತಹ ತಾಂತ್ರಿಕ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಎ.ಎಸ್.ರಂಜಿತ್ ಕುಮಾರ್ ತಿಳಿಸಿದರು.
Key words: Har Ghar Jal –scheme- work - connecting - completed - 2024-mysore- A.S. Ranjith Kumar