ಹೆಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ: ಕಿಡ್ನಾಪ್ ಕೇಸ್ ದಾಖಲು
ಮೈಸೂರು,ಮೇ,3,2024 (www.justkannada.in): ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಇದೀಗ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು ಸಂತ್ರಸ್ತ ಮಹಿಳೆಯ ಅಪಹರಣ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ.
ಮೈಸೂರಿನ ಕೆಆರ್ ನಗರದಲ್ಲಿ ಸಂತ್ರಸ್ತ ಮಹಿಳೆಯ ಪುತ್ರ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯ ಪುತ್ರನ ದೂರು ಆಧರಿಸಿ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಚ್ ಡಿ ರೇವಣ್ಣ ಸತೀಶ್ ಬಾಬು ವಿರುದ್ದ ಎಫ್ ಐಆರ್ ದಾಖಲಾಗಿದೆ. ಸೆಕ್ಷನ್ 364(A) ,365, ಹಾಗು 34 ಅಡಿ ಪ್ರಕರಣ ದಾಖಲಾಗಿದ್ದು ಪ್ರಕರಣದಲ್ಲಿ ರೇವಣ್ಣ A1 ಆರೋಪಿ, ಸತೀಶ್ ಬಾಬು A2 ಆರೋಪಿಯಾಗಿದ್ದಾರೆ.
ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಬಳಿಕ ಸಂತ್ರಸ್ತ ಮಹಿಳೆ ನಾಪತ್ತೆಯಾಗಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ಸಂತ್ರಸ್ತ ಮಹಿಳೆಯ ಪುತ್ರ, ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ಸತೀಶ್ ಎಂಬಾತ ಬೈಕ್ ನಲ್ಲಿ ಕರೆದೊಯ್ದ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಸತೀಶ್ ಬಂದು ನನ್ನ ತಾಯಿಯನ್ನ ಕರೆದುಕೊಂಡು ಹೋಗಿದ್ದರು. ಭವಾನಿ ಅಕ್ಕಾ ಕರೆಯುತ್ತಿದ್ದಾರೆಂದು ಹೇಳಿ ಕರೆದುಕೊಂಡು ಹೋಗಿದ್ದರು. ಸಂಜೆ ಮನೆಗೆ ಕರೆದುಕೊಂಡು ಬಂದು ಬಿಟ್ಟರು. ಪೊಲೀಸ್ ಬಂದರೆ ಏನೂ ಹೇಳಬೇಡಿ. ಅವರಿಗೆ ಯಾವುದೇ ಕಾರಣಕ್ಕೂ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಹಾಕಲಾಗುತ್ತದೆ. ಅವರು ಬಂದರೆ ನಮಗೆ ನೀವು ತಿಳಿಸಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು ಎಂದು ಸಂತ್ರಸ್ತೆಯ ಪುತ್ರ ದೂರಿನಲ್ಲಿ ವಿವರಿಸಿದ್ದಾರೆ.
ಏಪ್ರಿಲ್ 29ರಂದು 9 ಗಂಟೆಗೆ, 'ನಿಮ್ಮ ತಾಯಿ ಪೊಲೀಸಿನವರಿಗೆ ಸಿಕ್ಕಿ ಹಾಕಿಕೊಂಡರೆ ಕೇಸು ಆಗುತ್ತದೆ. ಮತ್ತೆ ನೀವು ಸಹ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನನ್ನ ತಾಯಿಗೆ ಹೇಳಿ ನನ್ನ ತಾಯಿಯನ್ನು ಒತ್ತಾಯ ಮಾಡಿಕೊಂಡು ಕರೆದುಕೊಂಡು ಹೋದರು. ನನ್ನ ತಾಯಿಯನ್ನು ಹೆದರಿಸಿ ಒತ್ತಾಯವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆಯ ಪುತ್ರ ಆರೋಪಿಸಿದ್ದಾರೆ.
ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಪಕ್ಕದ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ಮಹಿಳೆ ಕೆಲಸ ಮಾಡಿದ್ದರು.
Key words: HD Revanna, Kidnapping, case, mysore