ಸಿಎಂ ಸಿದ್ದರಾಮಯ್ಯ ವಿರುದ್ದ ಹೆಚ್.ಡಿಕೆ ಆರೋಪ: ಮನೆ ಮುಂಭಾಗವೇ ದಾಖಲೆ ರಿಲೀಸ್ ಮಾಡಿ ತಿರುಗೇಟು ಕೊಟ್ಟ ಎಂ. ಲಕ್ಷ್ಮಣ್
ಮೈಸೂರು,ಸೆಪ್ಟಂಬರ್,17,2024 (www.justkannada.in): ದಲಿತರನ್ನ ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಕೆಲ ದಾಖಲೆ ಬಿಡುಗಡೆ ಮಾಡುವ ಮೂಲಕ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದ ಮೈಸೂರಿನ ವಿಜಯನಗರಲ್ಲಿರುವ ಮನೆ ಬಳಿಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಭೇಟಿ ನೀಡಿ ಸಿದ್ದರಾಮಯ್ಯ ನಿರ್ಮಾಣ ಮಾಡಿದ್ದ ಮನೆ ಮುಂಭಾಗವೇ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಕೆಲ ದಾಖಲೆ ಬಿಡುಗಡೆ ಮಾಡಿ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಎಂ.ಲಕ್ಷ್ಮಣ್, ಸಿದ್ದರಾಮಯ್ಯ ಸಾಲ ಮಾಡಿ ಮನೆ ಕಟ್ಟಿದ್ದರು. ಮಾಡಿದ ಸಾಲ ತೀರಿಸಲು ಮನೆ ಮಾರಿದ್ದರು. 25 ವರ್ಷದ ಹಿಂದಿನ ವಿಚಾರವನ್ನು ಈಗ ಯಾಕೆ ವಿವಾದ ಮಾಡುತ್ತಿದ್ದೀರಿ? ಎಂದು ಹೆಚ್.ಡಿಕೆಗೆ ಪ್ರಶ್ನಿಸಿದರು.
1950ರಲ್ಲಿ ಸಾಕಮ್ಮ ಅವರ ತಂದೆ ಹೆಸರಲ್ಲಿ 1.20 ಎಕರೆ ಜಾಗ ಇತ್ತು. ಈ ಪೈಕಿ ಸಾಕಮ್ಮ ಅವರಿಗೆ ಸರ್ವೇ ನಂ 70/4ಎ ನಲ್ಲಿ 30 ಗುಂಟೆ ಜಮೀನು ಬಂತು. ಇದು ನೋಟಿಫೈ ಆಗಿರಲಿಲ್ಲ. ಈ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ 1997ರಲ್ಲಿ 120× 80 ಅಳತೆಯ ಮನೆ ನಿರ್ಮಿಸಿದರು. ಆರ್‌ಟಿಐ ಕಾರ್ಯಕರ್ತ ಗಂಗರಾಜು ಮುಡಾಕ್ಕೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮುಡಾದವರು 70/4ಎ ಬದಲು ನೋಟಿಫೈ ಆಗಿದ್ದ 70/4ಬಿ ಮಾಹಿತಿ ನೀಡಿದರು. ಆ ಮಾಹಿತಿಯ ಆಧಾರದ ಮೇಲೆ 2018ರಲ್ಲಿ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ಸಲ್ಲಿಸಿದ್ರು. ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಸಿದ್ದರಾಮಯ್ಯ ತಪ್ಪು ಇಲ್ಲ ಅಂತ ತೀರ್ಪು ಬಂತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. 2019ರಲ್ಲಿ ಹೈಕೋರ್ಟ್ ಕೂಡ ಪ್ರಕರಣವನ್ನು ರದ್ದು ಮಾಡಿದೆ. ಸುಪ್ರೀಂಕೋರ್ಟ್‌ನಲ್ಲೂ ಪ್ರಕರಣ ಅಡ್ಮಿಟ್ ಆಗಿಲ್ಲ. ಇಷ್ಟೆಲ್ಲ ಮುಗಿದ ಮೇಲೂ ದಲಿತರ ಜಾಗವನ್ನು ಒಕ್ಕಲೆಬ್ಬಿಸಿ ಸಿದ್ದರಾಮಯ್ಯ ಮನೆ ಕಟ್ಟಿಕೊಂಡಿದ್ದಾರೆ ಅಂತ ಆರೋಪ ಮಾಡುತ್ತಿದ್ದಾರೆ.
1998ರಲ್ಲೇ ಸಿದ್ದರಾಮಯ್ಯ ತಮ್ಮ ಮನೆಯನ್ನು ಖೋಡೆ ಅವರಿಗೆ ಮಾರಾಟ ಮಾಡಿದ್ದಾರೆ. ಸಿದ್ದರಾಮಯ್ಯ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಸಾಲ ಮಾಡಿ ಮನೆ ಕಟ್ಟಿದ್ದರು. ಸಾಲ ಪಾವತಿ ಮಾಡುತ್ತಿಲ್ಲ ಅಂತ ಪೇಪರ್ ನೋಟಿಫಿಕೇಷನ್ ಬಂದ ಮೇಲೆ ಬೇಸರದಿಂದ ಮನೆ ಮಾರಾಟ ಮಾಡಿ ಸಾಲ ತೀರಿಸಿದರು. ಈಗ ಸಿದ್ದರಾಮಯ್ಯ ಹೆಸರಲ್ಲಿ ಮನೆ ಇಲ್ಲ. ಆರೋಪ ಮಾಡುವ ಮುನ್ನ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಕುಮಾರಸ್ವಾಮಿ ವಿರುದ್ಧ ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ಕೊಟ್ಟರು.
Key words: HDK, allegation, CM Siddaramaiah, M. Lakshman