For the best experience, open
https://m.justkannada.in
on your mobile browser.

ದುಭಾಷಿಯ ನೆರವಿನಿಂದ ವಾದ ಆಲಿಸಲು ಹೈಕೋರ್ಟ್‌ ಸಜ್ಜು..!

12:43 PM Apr 05, 2024 IST | mahesh
ದುಭಾಷಿಯ ನೆರವಿನಿಂದ ವಾದ ಆಲಿಸಲು ಹೈಕೋರ್ಟ್‌ ಸಜ್ಜು

ಬೆಂಗಳೂರು ಏ.05, 2024  : (www.justkannada.in news)  ಸುಪ್ರೀಂ ಕೋರ್ಟ್‌ನಲ್ಲಿ ದುಭಾಷಿಯ ನೆರವಿನಿಂದ ಸಂಕೇತ ಭಾಷೆ ಬಳಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಾದ ಮಂಡಿಸಿ ಇತಿಹಾಸ ಸೃಷ್ಟಿಸಿರುವ ನಗರದ ವಾಕ್‌ ಮತ್ತು ಶ್ರವಣದೋಷ ಇರುವ ವಕೀಲೆ ಸಾರಾ ಸನ್ನಿ ಇದೀಗ ಕರ್ನಾಟಕ ಹೈಕೋರ್ಟ್‌ನಲ್ಲೂ ವಾದ ಮಂಡಿಸಲು ತಯಾರಾಗಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಇಂತಹುದೊಂದು ವಿಶೇಷ ಕಲಾಪಕ್ಕೆ ಹೈಕೋರ್ಟ್‌ ಹಾಲ್‌ 23 ಇದೇ 8ರಂದು ಸಾಕ್ಷಿಯಾಗಲಿದೆ.

ಸ್ಕಾಟ್ಲೆಂಡ್‌ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ಮಧ್ಯದ ಕೌಟುಂಬಿಕ ವ್ಯಾಜ್ಯದ ಪರಿಣಾಮ ಪತಿಗೆ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ  ಪ್ರಕರಣದಲ್ಲಿ ಪತ್ನಿಯ ಪರವಾಗಿ ವಾದ ಮಂಡಿಸಲು ಅವಕಾಶ ನೀಡುವಂತೆ ಕೋರಿ ಸಾರಾ ಸನ್ನಿ ಗುರುವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ಮನವಿಗೆ ಪ್ರಕರಣದ ಪ್ರತಿವಾದಿಗಳಾದ ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಮತ್ತು ಡೆಪ್ಯೂಟಿ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌ ಒಪ್ಪಿಗೆ ಸೂಚಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, “ಸಾರಾ ಸನ್ನಿ ಅವರಿಗೆ ದುಭಾಷಿ ನೆರವು ನೀಡಲು ವ್ಯವಸ್ಥೆ ಕಲ್ಪಿಸಿ' ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 8ಕ್ಕೆ ನಿಗದಿಗೊಳಿಸಿದೆ.

 ಪ್ರಕರಣವೇನು? :

ಮುಂಬೈನ ಠಾಣೆ ಜಿಲ್ಲೆಯ ಪತಿ 2004ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಟ್ಲೆಂಡ್‌ಗೆ ಹೋಗಿದ್ದರು. ಸದ್ಯ ಅವರು ಅಲ್ಲಿಯೇ ಬ್ಯಾಂಕ್‌ ಅಧಿಕಾರಿಯಾಗಿದ್ದು ಬ್ರಿಟಷ್‌ ಪೌರತ್ವ ಪಡೆದಿದ್ದಾರೆ. ಅವರಿಗೀಗ 41 ವರ್ಷ.

ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅವರು ಅನ್‌ಲೈನ್‌ ತಾಣದ ನೆರವಿನಿಂದ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ.21ರಂದು ವಿವಾಹವಾಗಿದ್ದಾರೆ.

"ಮದುವೆ ದಿನದ ರಾತ್ರಿ ನಮ್ಮಿಬ್ಬರ ಕುಟುಂಬದ ಸದಸ್ಯರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು. ಅವತ್ತು ನನ್ನ ಪತಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಅವರ ಮೊಬೈಲ್‌ ಫೋನ್‌ಗೆ ಬಂದ ಸಂದೇಶವೊಂದನ್ನು ನಾನು ಗಮನಿಸಿದೆ.

ಚುನಾವಣಾ ಕರ್ತವ್ಯ ನಿರ್ಲಕ್ಷ್ಯ ಆರೋಪ: ಉಪನ್ಯಾಸಕ ಅಮಾನತು.

ಮಹಿಳೆಯೊಬ್ಬರು ಕಳುಹಿಸಿದ್ದ ಆ ಸಂದೇಶವನ್ನು ಓದಿದೆ ಮತ್ತು ಕುತೂಹಲದಿಂದ ಅಕೆಯ ಹಿಂದಿನ ಸಂದೇಶಗಳನ್ನೂ ಕೆದಕಿ ಪರಿಶೀಲಿಸಿದಾಗ ನಾನು ಆತಂಕಕ್ಕೆ ಒಳಗಾದೆ. ಕಾರಣ, ಅ ಮಹಿಳೆಯ ಜೊತೆ ನನ್ನ ಪತಿ ಮೋಹ ಮತ್ತು ಲೈಂಗಿಕ ಸಲುಗೆ ಇರಿಸಿಕೊಂಡಿರುವುದು ನನ್ನ ಅರಿವಿಗೆ ಬಂದಿತು' ಎಂದು ಪತ್ನಿ ದೂರಿದ್ದಾರೆ.

"ಸಂದೇಶದ ಬಗ್ಗೆ ವಿಚಾರಿಸಿದಾಗ ನಮ್ಮಿಬ್ಬರ ನಡುವೆ ಮಾತಿನ ಸಂಘರ್ಷ ನಡೆಯಿತು. ಈ ವೇಳೆ ಪತಿ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಫಟನೆಯ ನಂತರ ಅವರೊಬ್ಬ ಪೀಡಕ ಮನೋವೃತ್ತಿಯ ಕುಡುಕ, ಲಂಪಟ ಎಂಬುದು ನನಗೆ ಗೊತ್ತಾಗಿದೆ. ತದನಂತರದಲ್ಲಿ ಅವರು ನನ್ನನ್ನು ವರದಕ್ಷಿಣೆಗಾಗಿ ಸತಾಯಿಸಿದ್ದಾರೆ' ಎಂದು ಆರೋಪಿಸಿ ಪತ್ನಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪತಿ, ಅವರ ತಂದೆ, ತಾಯಿ, ಅವರ ತಂಗಿ ಹಾಗೂ ಆಕೆಯ ಗಂಡನ ವಿರುದ್ಧ ದೂರು ನೀಡಿದ್ದರು.

 ಭಾರತೀಯ ದಂಡ ಸಂಹಿತೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯ ವಿರುದ್ಧಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

 ಕೃಪೆ : ಪ್ರಜಾವಾಣಿ

Key words : high court ,hear , arguments, with the help of, interpreter

ENGLISH SUMMARY :

Sara Sunny, a speech and hearing impaired lawyer from the city, who created history in October last year by using sign language with the help of an interpreter in the Supreme Court, is now all set to argue in the Karnataka High Court as well.

For the first time in the history of the Karnataka High Court, such a special session will be witnessed at the High Court Hall 23 on August 8.

Tags :

.