For the best experience, open
https://m.justkannada.in
on your mobile browser.

ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಘಟನೆ  ಹೇಯ ಕೃತ್ಯ: ದುಷ್ಕರ್ಮಿಗೆ ಗಲ್ಲಿಗೇರಿಸಿ: ಸಚಿವ ಎಂ. ಬಿ ಪಾಟೀಲ್

06:11 PM Apr 20, 2024 IST | prashanth
ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಘಟನೆ  ಹೇಯ ಕೃತ್ಯ  ದುಷ್ಕರ್ಮಿಗೆ ಗಲ್ಲಿಗೇರಿಸಿ  ಸಚಿವ ಎಂ  ಬಿ ಪಾಟೀಲ್

ಬೆಂಗಳೂರು,ಏಪ್ರಿಲ್,20,2024 (www.justkannada.in):  ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಕೃತ್ಯವನ್ನು ಅತ್ಯಂತ ಬರ್ಬರ ಘಟನೆ ಎಂದು ಖಂಡಿಸಿರುವ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಅವರು, ಈ ದುಷ್ಕೃತ್ಯ ಎಸಗಿದವನನ್ನು ಗಲ್ಲಿಗೇರಿಸಬೇಕು ಎಂದು ಶನಿವಾರ ಆಗ್ರಹಿಸಿದರು.

ಘಟನೆಯ ಬಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ  ಹೇಯ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಇಂತಹ ದುಷ್ಕೃತ್ಯ ಎಸಗಿದವರಿಗೆ  ತಕ್ಷಣವೇ ಕಠಿಣ ಶಿಕ್ಷೆ ಆಗಬೇಕು. ವಿಚಾರಣೆಯಲ್ಲಿ ವಿಳಂಬಕ್ಕೆ ಆಸ್ಪದವಾಗಬಾರದು ಹೀಗಾಗಿ, ತ್ವರಿತ ನ್ಯಾಯಾಲಯ ಸ್ಥಾಪನೆ ಆಗಬೇಕು' ಎಂದರು.

ಇಂತಹ ಘೋರ ದುಷ್ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣಾತಿ ಕಠಿಣ ಶಿಕ್ಷೆಯೇ ಆಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಇಂತಹ ಘಟನೆಯನ್ನು ಯಾರೇ ಮಾಡಿದರೂ ಖಂಡನಾರ್ಹ. ಇದೊಂದು ಬರ್ಬರ ಕೃತ್ಯವಾಗಿದ್ದು ಯಾವ ದೃಷ್ಟಿಯಿಂದಲೂ ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದರು.

ಈ ಘಟನೆಯ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಗಮನಕೊಡಲಿದೆ ಎಂದ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಘೋರಕೃತ್ಯ ಎಸಗಿದವರನ್ನು ವಿಳಂಬವಿಲ್ಲದೆ ಗಲ್ಲು ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುವಂತಹ ಕಾನೂನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಚಿಕ್ಕವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲೂ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದರು.

Key words: Hubli-student-murder-incident-Minister -M. B Patil

Tags :

.