For the best experience, open
https://m.justkannada.in
on your mobile browser.

ಮಾಧ್ಯಮಗಳು ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು : ನ್ಯಾ.ರವೀಂದ್ರ ಹೆಗ್ಡೆ

03:50 PM Jul 30, 2024 IST | mahesh
ಮಾಧ್ಯಮಗಳು ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು   ನ್ಯಾ ರವೀಂದ್ರ ಹೆಗ್ಡೆ

ಮೈಸೂರು, ಜು.30,2024:  ಮಾನವ ಕಳ್ಳ ಸಾಗಣಿಕೆ  ಸಮಾಜದ ಗಂಭೀರ ಸಮಸ್ಯೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ. ಮಾಧ್ಯಮಗಳು ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರವೀಂದ್ರ ಹೆಗ್ಡೆ ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಖಿ ಸ್ಟ್ಯಾಂಪ್ ಸೆಂಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ," ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ವಿಶ್ವಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು, ಬಡವರಿಗೆ ಉದ್ಯೋಗದ ನೀಡುವುದಾಗಿ ನಂಬಿಸಿ ಅವರನ್ನು ಬಾಲಕಾರ್ಮಿಕಯನ್ನಾಗಿ ಹಾಗೂ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಇಂತಹ ತಪ್ಪಿತಸ್ಥರ  ವಿರುದ್ಧ ಕೈಗೊಂಡ ಕ್ರಮಗಳನ್ನು ಮಾಧ್ಯಮಗಳು ಪ್ರಸಾರ ಮಾಡಬೇಕು. ಇದರಿಂದ ಜನರಲ್ಲಿ ಅರಿವು ಮೂಡುತ್ತದೆ ಅಲ್ಲದೇ ಮುಂದೆ ಎಚ್ಚರಿಕೆಯಿಂದ ಇರಲು ಸಹಕಾರಿಯಾಗುತ್ತದೆ ಎಂದರು.

ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ ರಸ್ತೆ ಬದಿಗಳಲ್ಲಿ ಮಕ್ಕಳನ್ನು ಪೆನ್, ಸ್ಟಿಕರ್ಸ್ ಹೀಗೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು, ಭಿಕ್ಷೆ ಬೇಡಲು ಬಿಡುತ್ತಾರೆ. ಸಾರ್ವಜನಿಕರು ಅದನ್ನು ಗುರುತಿಸದೆ ಕೊಂಡುಕೊಳ್ಳುವುದರ ಮೂಲಕ  ಪರೋಕ್ಷವಾಗಿ ಕಳ್ಳ ಸಾಗಾಣಿಕೆಗೆ ಸಹಾಯ ಮಾಡಿದಂತಾಗುತ್ತದೆ. ಹಾಗಾಗಿ ಈ ರೀತಿಯಾಗಿ ಯಾವುದೇ ವ್ಯಕ್ತಿ ಅಥವಾ ಮಕ್ಕಳು ಕಂಡು ಬಂದರೆ ಅವರ ಹಿನ್ನೆಲೆಯನ್ನು ತಿಳಿದು, ಅಂತಹ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಮಾನವ ಕಳ್ಳ ಸಾಗಣಿಕೆ ಎಂಬ ದೊಡ್ಡ ಪಿಡುಗನ್ನು ನಾಶಮಾಡಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಇಲಾಖೆ, ಪ್ರತಿಯೊಂದು ಸಂಸ್ಥೆ ಹಾಗೂ ಸಾರ್ವಜನಿಕರ ಒಗ್ಗಟ್ಟಿನಿಂದ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ಎಂಬ ಸಮಸ್ಯೆಯನ್ನು ಇಲ್ಲದಂತೆ ಮಾಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಎಂ ಗಾಯತ್ರಿ , ಅಸಂಘಟಿತ ವಲಯಗಳು ಸಂಘಟಿತವಾಗಿ ಮಾಡುವ ಶೋಷಣೆಯೇ ಮಾನವ ಕಳ್ಳ ಸಾಗಾಣಿಕೆ. ಇದರ ಬಗ್ಗೆ ಪ್ರತಿಯೊಂದು ಇಲಾಖೆಯೂ  ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಕೈಗೊಂಡು ಜಾಗೃತಿಯನ್ನು ಮೂಡಿಸಬೇಕು ಎಂದರು.

ಶಾಲೆಯಿಂದಲೇ ಮಕ್ಕಳಿಗೆ  ಅಪರಿಚಿತರಿಂದ ದೂರವಿರುವಂತೆ ಎಚ್ಚರಿಕೆ ವಹಿಸಲು  ಅರಿವು ಮೂಡಿಸಬೇಕು. ಕಾರ್ಮಿಕ ಇಲಾಖೆಯವರು ಬಾಲಕಾರ್ಮಿಕರನ್ನು ಪತ್ತೆಹಚ್ಚಿ, ಬಾಲಕಾರ್ಮಿಕ ಮುಕ್ತರನ್ನಾಗಿ ಮಾಡಬೇಕು  ಎಂದು ಹೇಳಿದರು.

ಸರ್ಕಾರೇತರ ಸಂಸ್ಥೆಗಳು ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು ಕೈಜೋಡಿಸಬೇಕು. ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜನರಿಗೆ ಕಳ್ಳ ಸಾಗಾಣಿಕೆ ಬಗ್ಗೆ ವಿಷಯ ಮುಟ್ಟಿಸಬೇಕು. ಇದರಲ್ಲಿ ಪ್ರತಿಯೊಂದು ಇಲಾಖೆಯ ಹಾಗೂ ಸಾರ್ವಜನಿಕರ  ಪಾತ್ರ ಬಹಳ ಮುಖ್ಯವಾಗಿದ್ದು  ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್  ಮಾತನಾಡಿ, ಪ್ರಸ್ತುತ ಮಾನವ ಕಳ್ಳ ಸಾಗಾಣಿಕೆ ಎಂಬುದು  ಒಂದು ದೊಡ್ಡ ಸಮಸ್ಯೆಯಾಗಿದ್ದು, ಕಾಣೆಯಾದ ಯಾವುದೇ ಪ್ರಕರಣವನ್ನು  ನಿರ್ಲಕ್ಷಿಸದೆ  ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇಂದು ಬಡತನದಿಂದ ಇರುವವರು ನಿರುದ್ಯೋಗಿಗಳು ಕುರುಡು ನಂಬಿಕಯಿಂದ ಹಾಗೂ ಉದ್ಯೋಗದ ಆಸೆಯಿಂದ ಜನರನ್ನು ನಂಬಿ, ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ.  ಇದನ್ನು ಜನರು ಆದಷ್ಟು ಬೇಗ ಅರಿತು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಬೇಕು. ಆಗ ಮಾತ್ರವೇ ಕಳ್ಳ ಸಾಗಾಣಿಕೆಯ  ಅಂತ್ಯ ಸಾಧ್ಯ  ಎಂದರು.

ಮಾನವ ಕಳ್ಳ ಸಾಗಾಣಿಕೆ ಎಂಬುದು ದೊಡ್ಡ ಮಟ್ಟದ ಅಪರಾಧವಾಗಿದ್ದು ದೇಶದ ಭದ್ರತೆಗೆ ಮಾರಕವಾಗಿದೆ. ಹಾಗಾಗಿ ಪ್ರತಿಯೊಬ್ಬರೂ  ಕೈಜೋಡಿಸಿ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ  ಅಧಿಕಾರಿಗಳಿಗೆ ಮಾನವ ಕಳ್ಳ ಸಾಗಣಿಕೆ ಕುರಿತಂತೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿ  ದಿನೇಶ್ ಬಿ.ಜಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಿ ಸಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

key words:  Media, should create, awareness, among people, about, human trafficking: Justice Ravindra Hegde

Tags :

.