For the best experience, open
https://m.justkannada.in
on your mobile browser.

ಶೀಲ ಶಂಕಿಸಿ 12 ವರ್ಷಗಳ ಕಾಲ ಪತ್ನಿಗೆ ಪತಿಯಿಂದ ದಿಗ್ಬಂಧನ.

11:01 AM Feb 01, 2024 IST | prashanth
ಶೀಲ ಶಂಕಿಸಿ 12 ವರ್ಷಗಳ ಕಾಲ ಪತ್ನಿಗೆ ಪತಿಯಿಂದ ದಿಗ್ಬಂಧನ

ಮೈಸೂರು,ಫೆಬ್ರವರಿ,1,2024(www.justkannada.in): ಪತಿ ಮಹಾಶಯನೊಬ್ಬ ಪತ್ನಿಯ ಶೀಲ ಶಂಕಿಸಿ  12 ವರ್ಷಗಳ ಕಾಲ ಪತ್ನಿಯನ್ನ ದಿಗ್ಬಂಧನದಲ್ಲಿರಿಸಿದ್ದ ಘಟನೆ ಬೆಳಕಿಗೆ ಬಂದಿದೆ.

ಮೈಸೂರು‌ ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೃಹಿಣಿ ಸುಮ ಎಂಬುವವರೇ 12 ವರ್ಷದಿಂದ ಅಜ್ಞಾತವಾಸದಲ್ಲಿದ್ದವರು. ಸಣ್ಣಾಲಯ್ಯ ಎಂಬಾತನೇ  ಈ ಕೃತ್ಯವೆಸಗಿರುವ ಆಕೆಯ ಪತಿ.

ಮಹಿಳೆ ಸುಮಾ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದವರಾಗಿದ್ದಾರೆ. ಪತ್ನಿಯ ಶೀಲ ಶಂಕಿಸಿ ಪತಿ ಸಣ್ಣಾಲಯ್ಯ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಬಂಧನದಲ್ಲಿರಿಸಿದ್ದನು. 12ವರ್ಷದ ಹಿಂದೆ ಸುಮಾ ಸಣ್ಣಾಲಯ್ಯನನ್ನು ವಿವಾಹವಾಗಿದ್ದರು. 3ನೇ ಪತ್ನಿ ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸೆತ್ತು ಪತಿಯಿಂದ ದೂರಾಗಿದ್ದರು.

ಈ ನಡುವೆ ಪತ್ನಿಯ ಶೀಲ ಶಂಕಿಸಿ ಮನೆಯ ಕಿಟಕಿಗಳನ್ನೂ ಭದ್ರಪಡಿಸಿ ಮನೆಯಿಂದ ಯಾರೊಂದಿಗೂ ಮಾತನಾಡದಂತೆ ಪತಿ ಸಣ್ಣಾಲಯ್ಯ ಎಚ್ಚರವಹಿಸಿದ್ದ.  ಶೌಚಾಲಯ ಇಲ್ಲದ ಕಾರಣ ಬಕೆಟ್  ಇರಿಸಿ ರಾತ್ರಿ ವೇಳೆ ಮಲ,ಮೂತ್ರವನ್ನ ಪಾಪಿ ಪತಿ ಹೊರಗೆ ಸುರಿಸುತ್ತಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಸಾಂತ್ವನ ಕೇಂದ್ರದ ಜಶೀಲ, ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಮನೆಯ ಸುತ್ತ ಗ್ರಾಮಸ್ಥರು ಜಮಾಯಿಸಿದ್ದರು.

ಈ ಮಧ್ಯೆ ಸಣ್ಣಾಲಯ್ಯ ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಈತನ ವರ್ತನೆಯಿಂದ ಗ್ರಾಮಸ್ಥರಲ್ಲೂ ಭಯದ ವಾತಾವರಣ ಉಂಟಾಗಿ ಘಟನೆ ಕುರಿತು ಮಾಹಿತಿ ನೀಡಲು ಗ್ರಾಮಸ್ಥರು ಹಾಗೂ ನೆರೆಹೊರೆಯವರು ಹಿಂಜರಿಯುತ್ತಿದ್ದರು ಎನ್ನಲಾಗಿದೆ.

ಹಲವಾರು ಬಾರಿ ಗ್ರಾಮದಲ್ಲಿ  ನ್ಯಾಯ ಪಂಚಾಯ್ತಿ ನಡೆದಿತ್ತು. ಸಣ್ಣಾಲಯ್ಯ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿ ಮುಂದುವರೆಸುತ್ತಿದ್ದ. ಈ ನಡುವೆ ಬುಧವಾರ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದ್ದು,  ಪೊಲೀಸರು ರಾತ್ರೋ ರಾತ್ರಿ ಭೇಟಿ ನೀಡಿ ಸುಮಾ ಮತ್ತು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿದ್ದು, ಮಹಿಳೆ ಒಪ್ಪಿಗೆಯಂತೆ ತವರು ಮನೆಯಲ್ಲಿ ಆಶ್ರಯ ಕೊಡಿಸಿದ್ದಾರೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: husband - his wife –under- siege - 12 years -mysore

Tags :

.