ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಬಿಜೆಪಿ ಟೀಕೆಗೆ ಖಡಕ್ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್.
ಕಲಬುರುಗಿ,ಜನವರಿ,19,2024(www.justkannada.in): ಕಾಂಗ್ರೆಸ್ ಪಕ್ಷವನ್ನ ಹಿಂದೂ ವಿರೋಧಿ ಎಂದು ಟೀಕಿಸಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡೋದು ಬಿಟ್ಟು ಬಿಡಬೇಕು. ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ. ಹಿಂದೂ ವಿರೋಧಿ ಆಗಿದ್ದರೆ 135 ಸೀಟ್ ಹೇಗೆ ಬರುತ್ತಿದ್ದವು? ಎಂದು ಪ್ರಶ್ನಿಸಿ ಬಿಜೆಪಿಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಜಗದೀಶ್ ಶೆಟ್ಟರ್, ರಾಮ ಮಂದಿರ ಅನ್ನೋದು ಧಾರ್ಮಿಕತೆ, ಧರ್ಮದ ಸಂಕೇತ, ಧರ್ಮ ಜಾಗೃತಿ ಮಾಡಲು, ದೇಶವನ್ನು ಒಂದು ಮಾಡಲು ಇರುವಂಥದ್ದು. ಶ್ರೀರಾಮ ಮಂದಿರದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಬರಬಾರದು. ಆಹ್ವಾನ ಬಂದಂಥವರು ಬೇರೆ ಬೇರೆ ಕಾರಣದಿಂದ ಹೋಗಲ್ಲ ಅಂತಾ ಕಾಂಗ್ರೆಸ್ ನವರು ಹೇಳಿದ್ದಾರೆ. ಅದಕ್ಕೆ ಬಿಜೆಪಿ ಅವರು ಟೀಕೆ ಮಾಡಿದ್ದಾರೆ ಎಂದರು.
ಮತ್ತೆ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಬಿಜೆಪಿಯಿಂದ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನಾನು ವಾಪಸ್ ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಆಗ ನನಗೆ ಬಿಜೆಪಿಯಲ್ಲಿ ಅಪಮಾನ ಆಗಿತ್ತು, ಅವರಿಗೆ ಪಾಠ ಕಲಿಸಬೇಕಿತ್ತು, ಕಲಿಸಿದ್ದೇನೆ, ಕಾಂಗ್ರೆಸ್‌ನಲ್ಲಿ ಸಮಾಧಾನವಾಗಿದ್ದೇನೆ ಎಂದರು.
ಆಸೆ ಇಟ್ಟುಕೊಂಡು ನಾನು ಕಾಂಗ್ರೆಸ್ ಗೆ ಬಂದಿಲ್ಲ. ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಅಂತಾ ಹಲವಾರು ಬಾರಿ ಹೇಳಿದ್ದೇನೆ. ನಾನು ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಮತ್ತೊಮ್ಮೆ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
Key words: If -Congress - anti-Hindu-how - get -135 seats- Jagdish Shettar- BJP.