ಹಿಂದುಳಿದ ವರ್ಗದ ಸಿಎಂ ವಿರುದ್ಧ ಅಸಹನೆ- ಸಚಿವ ಎಂ. ಬಿ ಪಾಟೀಲ್ ಆರೋಪ
ಮೈಸೂರು,ಆಗಸ್ಟ್, 9,2024 (www.justkannada.in): ಹಿಂದುಳಿದ ವರ್ಗದಿಂದ ಬಂದಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಅಪಥ್ಯವಾಗಿದೆ. ಹೀಗಾಗಿ ಅವು ಆಧಾರರಹಿತ ಆರೋಪಗಳನ್ನು ಮಾಡುತ್ತ ಕುರ್ಚಿಯಿಂದ ಕೆಳಕ್ಕಿಳಿಸಲು ಸಂಚು ರೂಪಿಸುತ್ತಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರಿನಲ್ಲಿ ನಡೆಸಿದ ಜನಾಂದೋಲನ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಅವರು ನಲವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ಈ ನಾಲ್ಕು ದಶಕಗಳಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೂ ಅವರ ಸಾರ್ವಜನಿಕ ಬದುಕಿನಲ್ಲಿ ಇಲ್ಲ. ಈಗ ಮುಡಾ ಹಗರಣದ ನೆಪದಲ್ಲಿ ಅವರನ್ನು ಪದಚ್ಯುತಗೊಳಿಸುವ ಪಿತೂರಿ ನಡೆಯುತ್ತಿದೆ. ಆದರೆ ನಾವೆಲ್ಲರೂ ಸಿಎಂ ಬೆಂಬಲಕ್ಕೆ ಇದ್ದೇವೆ. ಜನಾದೇಶವೂ ಅವರ ಪರವಾಗಿಯೇ ಇದೆ ಎಂದು ಅವರು ಪ್ರತಿಪಾದಿಸಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಕಿಂಚಿತ್ತೂ ಇಲ್ಲ. ಮುಡಾ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು, ಕಾನೂನಿನ ಪ್ರಕಾರವೇ ಅವರ ಪತ್ನಿಗೆ ಬದಲಿ ನಿವೇಶನಗಳನ್ನು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನಿದೆ ಎಂದು ಅವರು ಪ್ರಶ್ನಿಸಿದರು.
ಎಚ್ ಡಿ ದೇವೇಗೌಡರು ಮತ್ತು ಅವರ ಕುಟುಂಬದವರು ಹಾಗೂ ನೆಂಟರಿಷ್ಟರೆಲ್ಲ ಹಾಸನದಲ್ಲಿ ನೂರಾರು ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಾಪಪ್ರಜ್ಞೆ ಇಲ್ಲದ ಎಚ್ ಡಿ ಕುಮಾರಸ್ವಾಮಿ ಈಗ ಬಿಜೆಪಿ ಜತೆ ಸೇರಿಕೊಂಡು ಪಾದಯಾತ್ರೆಯ ನಾಟಕ ಆಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಜೆಡಿಎಸ್ ಜಾತ್ಯತೀತ ತತ್ವಕ್ಕೆ ಎಳ್ಳುನೀರು ಬಿಟ್ಟು, ಅದನ್ನೆಲ್ಲ ಬಿಜೆಪಿಗೆ ಒಪ್ಪಿಸಿದೆ. ಈಗ ಸ್ವಾರ್ಥಕ್ಕಾಗಿ ಅದು ಭ್ರಷ್ಟ ಬಿಜೆಪಿ ಜತೆ ಸೇರಿಕೊಂಡು, ಅಸ್ತಿತ್ವಕ್ಕೆ ಹೋರಾಡುತ್ತಿದೆ ಎಂದು ಅವರು ಹರಿಹಾಯ್ದರು.
ಮುಡಾದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನಗಳ ಹಂಚಿಕೆ ಬಿಜೆಪಿ ಸರಕಾರದಿಂದ ಆಗಿರುವ ಘಟನೆಯಾಗಿದೆ. ಆಗ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೇ ಇದ್ದರು. ವಾಸ್ತವವಾಗಿ ಅವ್ಯವಹಾರ ಮಾಡಿರುವವರು ಅವರು. ಆದರೆ ವಿನಾ ಕಾರಣ ಸಿಎಂ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಕೇಂದ್ರ ಬಿಜೆಪಿ ಸರಕಾರದ ಕುಮ್ಮಕ್ಕು ಇದೆ ಎಂದು ಎಂ.ಬಿ ಪಾಟೀಲ್ ಹೇಳಿದರು.
ಬಿಜೆಪಿ ಮುಖಂಡರಾದ ಬಸನಗೌಡ ಯತ್ನಾಳ ಅವರು ಸ್ವತಃ ತಮ್ಮ ಪಕ್ಷದವರ ಮೇಲೆಯೇ ಬಹಿರಂಗವಾಗಿ ಆರೋಪಿಸಿ, ಯಡಿಯೂರಪ್ಪ ಅವರು ಮಾರಿಷಸ್ ನಲ್ಲಿ 10 ಸಾವಿರ ಕೋಟಿ ಇಟ್ಟು ಬಂದಿದ್ದಾರೆ ಅಂತ ಹೇಳಿದ್ದರು. ಕೊರೊನಾ ಅಕ್ರಮದಲ್ಲಿ 2,000 ಕೋಟಿ ಲೂಟಿ ನಡೆದಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ಎಲ್ಲದರಲ್ಲೂ ಲೂಟಿ ಮಾಡಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಿದರು.
ಬಿಜೆಪಿ- ಜೆಡಿಎಸ್ ಪಕ್ಷದವರು ನಾಳೆ ಇಲ್ಲಿಗೆ ಬಂದಾಗ ಇವೆಲ್ಲಾ ಪ್ರಶ್ನೆಗಳನ್ನು ಜನರು ಕೇಳಬೇಕು. ಲೂಟಿ ಮಾಡಿದ ನೀವು, ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ಏಕೆ ಬಂದಿದ್ದೀರಿ? ಎಂದು ಧ್ವನಿ ಎತ್ತಬೇಕು ಎಂದು ಅವರು ಕರೆ ಕೊಟ್ಟರು.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಜಾರ್ಜ್ ಸೇರಿದಂತೆ ಕಾಂಗ್ರೆಸ್ಸಿನ ನಾಯಕಗಣವೇ ನೆರೆದಿತ್ತು.
Key words: Impatience, against, backward class, CM, Minister, M. B Patil