ಇಂಡುವಾಳು ಹೊನ್ನಯ್ಯ ಪ್ರಶಸ್ತಿಗೆ ಎನ್.ಎಸ್ ರಾಮೇಗೌಡ ಮತ್ತು ವಿ.ಆರ್. ಶೈಲಜಾ ಆಯ್ಕೆ
ಮಂಡ್ಯ,ಆಗಸ್ಟ್,27,2024 (www.justkannada.in): ಜನದನಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಸಂಘ ನೀಡುವ 27ನೇ ವರ್ಷದ 'ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ'ಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎನ್.ಎಸ್. ರಾಮೇಗೌಡ ಹಾಗೂ 'ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ'ಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜಾ ಅವರು ಆಯ್ಕೆಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಟ್ರಸ್ಟ್ ಸಂಸ್ಥಾಪಕ ಪ್ರೊ.ಬಿ. ಜಯಪ್ರಕಾಶಗೌಡ, ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸೆ.1ರಂದು ನಡೆಯುವ ಸಮಾರಂಭದಲ್ಲಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಶಸ್ತಿಯು ತಲಾ ₹ 25ಸಾವಿರ ನಗದು ಒಳಗೊಂಡಿದೆ ಎಂದು ತಿಳಿಸಿದರು.
ಇಂಡುವಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಆರ್. ದೀಪಿಕಾ, ಐ.ವಿ. ಚರಣ್ ಅವರಿಗೆ ಶಾರದಮ್ಮ ವಿದ್ಯಾರ್ಥಿ ಪುರಸ್ಕಾರ ಹಾಗೂ ಕೊತ್ತತ್ತಿ ಗ್ರಾಮದ ಶ್ರೀವಿದ್ಯಾ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸ್ನೇಹಾ, ಪಿ.ಜೆ. ಮಾದೇಶ್ ಅವರಿಗೆ ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರತಿ ವಿದ್ಯಾರ್ಥಿಗೆ ತಲಾ ₹ 5ಸಾವಿರ ನಗದು ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೆ.ಜಯರಾಮ್, ಕಾರ್ಯದರ್ಶಿ ಸೋಮಶೇಖರ್ ಉಪಸ್ಥಿತರಿದ್ದರು.
Key words: Induvalu Honnayya Award, N.S. Ramegowda, V.R. shailaja