ಮೂಲಭೂತ ಸೌಲಭ್ಯ ಕಾಮಗಾರಿಗಳ ಪರಿವೀಕ್ಷಣೆ: ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ-ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಸೆಪ್ಟಂಬರ್,12, 2024 (www.justkannada.in): ನಗರದಲ್ಲಿ ರಸ್ತೆ ಗುಂಡಿಗಳನ್ನು ಅತೀ ಶೀಘ್ರವಾಗಿ ದುರಸ್ತಿ ಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, :20.09.2024ರೊಳಗಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ ಹಾಗೂ ರಸ್ತೆ ಅಭಿವೃದ್ಧಿ ಮತ್ತು ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ಮಾತನಾಡಿದರು.
ಬೆಂಗಳೂರು ನಗರದಲ್ಲಿ ಸುಮಾರು 12878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1344.84 ಕಿ.ಮೀ ಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಗುಂಪಿಗೆ ಸೇರುತ್ತಿದ್ದು, ಉಳಿಕೆ ಸುಮಾರು 11533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆ ಗುಂಪಿಗೆ ಸೇರಿರುತ್ತದೆ. ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ “ಸಾಂಪ್ರದಾಯಿಕವಾಗಿ” ಬೆಸ್ಕಾಂ ಕೇಬಲ್, ನೀರು ಸರಬಾರಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್ ಗ್ಯಾಸ್ ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆ ಗುಂಡಿಗಳು ಉದ್ಭವಿಸುತ್ತಿರುವುದು ಗಮನಿಸಲಾಗಿದೆ. ಈ ರಸ್ತೆ ಗುಂಡಿಗಳನ್ನು ಅತೀ ಶೀಘ್ರವಾಗಿ ದುರಸ್ತಿ ಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಬ್ಯಾಚ್ ಮಿಕ್ಸ್ ಘಟಕದಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಉದ್ಭಿಸುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ತಿಳಿಸಿದರು.
ಅದೇ ರೀತಿ ವಲಯ ಮಟ್ಟದ ರಸ್ತೆಗಳನ್ನು ವಾರ್ಡ್ ವಾರು ವಿಭಾಗಗೊಳಿಸಲಾಗಿದ್ದು, ಪ್ರತಿ ವಾರ್ಡ್ ಗೆ ರೂ.15.00 ಲಕ್ಷಗಳಂತೆ ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ರಸ್ತೆ ಗುಂಡಿ ಉದ್ಭಿಸಿದ ಕೆಲವೇ ಸಮಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳು ಉದ್ಭಿಸುತ್ತಿದ್ದು, ಮಳೆಗಾಲದಲ್ಲಿಯೂ ರಸ್ತೆ ಗುಂಡಿ ಮುಚ್ಚಲು ತಂಪಾದ ಡಾಂಬರ ಮಿಶ್ರಣ ಪದ್ಧತಿ ಅನ್ನು ತಯಾರಿಸುವ ಘಟಕವನ್ನು ಸಹ ಬಿಬಿಎಂಪಿ ವತಿಯಿಂದಲೆ ಸ್ಥಾಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಸ್ತೆ ಅಗೆತದಿಂದ ಆಗುವ ರಸ್ತೆ ಗುಂಡಿಗಳನ್ನು ಆಯಾ ಸಂಸ್ಥೆಗಳೇ ಅಂದರೆ ಬೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ಗೇಲ್‌ಗ್ಯಾಸ್ ರವರುಗಳೇ ಮುಚ್ಚುವಂತೆ ಆದೇಶ ನೀಡಲಾಗಿದ್ದು, ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲಾಗುತ್ತಿದೆ. BWSSB ಸಂಸ್ಥೆ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಲಾಗಿದ್ದು, ರಸ್ತೆ ಅಗೆಯುವ/ರಸ್ತೆ ದುರಸ್ಥಿಗೊಳಿಸುವ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲಾಗಿರುತ್ತದೆ. ರಸ್ತೆ ಅಗೆತವನ್ನು ತಡೆಗಟ್ಟಲು ಪ್ರಮುಖ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿಯ ಜೊತೆಗೆ ಡಕ್ಟ್ ಗಳ ನಿರ್ಮಾಣವನ್ನು ಕೈಗೊಂಡಿರುವ ಹಿನ್ನಲೆಯಲ್ಲಿ ರಸ್ತೆ ಗುಂಡಿಗಳ ಉದ್ಭವಿಕೆಗೆ ಕಡಿವಾಣ ಹಾಕಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಮತ್ತು ದುರಸ್ಥಿ ಪಡಿಸಲು ಹಾಗೂ ನಿಗಧಿತ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲಾದ ಕಾರ್ಯವಿಧಾನದ ಬಗ್ಗೆ ನಿಗಾ ವಹಿಸಲು “ರಸ್ತೆ ಗುಂಡಿ ಗಮನ” ಎಂಬ ನೂತನ ಮೊಬೈಲ್ ಆಪ್ ಅನ್ನು ಸೃಜಿಸಲಾಗಿದೆ. ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲು 2023-24ನೇ ಸಾಲಿನಲ್ಲಿ ಒಟ್ಟು ರೂ.1700.00 ಕೋಟಿಗಳ ಅನುದಾನದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ವೈಟ್ ಟಾಪಿಂಗ್ ರಸ್ತೆ ನಿರ್ಮಾಣದಿಂದ ಧೀರ್ಘಬಾಳಿಕೆಯ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ರಸ್ತೆಗಳನ್ನು ನಿರ್ಮಿಸಿದ್ದಂತಾಗಿದೆ
ಬೆಂಗಳೂರು ನಗರದಲ್ಲಿ ಒಟ್ಟು 1611 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, 459 ಕಿ.ಮೀ. ಉದ್ದದ ರಸ್ತೆ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಪ್ರಸ್ತುತ ವರ್ಷದಲ್ಲಿಯೇ ಈ 459 ಕಿ.ಮೀ. ಉದ್ದದ ರಸ್ತೆಯನ್ನು 659.71 ಕೋಟಿಗಳಲ್ಲಿ ಡಾಂಬರಿಕರಣವನ್ನು ನವಂಬರ್ ತಿಂಗಳಿನಿಂದ ಕೈಗೆತ್ತಿಗೊಳ್ಳಲಾಗುವುದು ಮತ್ತು ಮಾರ್ಚ್ ಅಂತ್ಯದವರೆಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ರಸ್ತೆ ಗುಂಡಿ ಗಮನ ಆಪ್‌ನಲ್ಲಿ ಇಲ್ಲಿಯವರೆಗೂ 1376 ರಸ್ತೆ ಗುಂಡಿಗಳನ್ನು ಪೂರ್ಣಗೊಳಿಸಲಾಗಿದ್ದು, 2684 ರಸ್ತೆ ಗುಂಡಿಗಳ ತ್ವರಿತ ದುರಸ್ಥಿಗೊಳಿಸಲು ಕ್ರಮವಹಿಸಲಾಗಿದೆ. ವಾರ್ಡ್ ಮಟ್ಟದ ರಸ್ತೆಗಳಲ್ಲಿನ ಗುಂಡಿಗಳನ್ನು ದುರಸ್ಥಿಗೊಳಿಸಲು ಪ್ರತಿ ವಾರ್ಡ್ ರೂ.15/- ಲಕ್ಷಗಳನ್ನು ನೀಡಲಾಗಿರುತ್ತದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳನ್ನು ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಸ್ವಂತ ಬ್ಯಾಚ್ ಮಿಕ್ಸ ಘಟಕದಿಂದ ಡಾಂಬರು ಪೂರೈಸಲಾಗುತ್ತಿದ್ದು, ದಿನಾಂಕ:20.09.2024ರೊಳಗಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Inspection, infrastructure works, all potholes, CM Siddaramaiah