ಜನತಾದರ್ಶನ: ಉದ್ಯಮಿಯ ನಿವೇಶನ ನೋಂದಣಿ ಮಾಡುವಂತೆ ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.
ಕಲ್ಬುರ್ಗಿ,ನವೆಂಬರ್, 27,2023(www.justkannada.in): ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಫುಡ್ ಪಾರ್ಕ್ ನಲ್ಲಿ ಉದ್ಯಮಿ ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರು ನಿವೇಶನ ಖರೀದಿಗೆ ನಿಗದಿತ ಹಣ ಪಾವತಿ ಮಾಡಿ 7 ವರ್ಷವಾದರೂ, ಇದೂವರೆಗೆ ನೋಂದಣಿಯಾಗಿಲ್ಲ ಎಂಬ ದೂರು ಬಂದ ಹಿನ್ನೆಲೆ, ಕೂಡಲೇ ನಿವೇಶನ ಉದ್ಯಮಿದಾರರ ಹೆಸರಿಗೆ ನೊಂದಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸೂಚನೆ ನೀಡಿದರು.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ "ಕೃಷ್ಣಾ"ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಬಂಧ ಅಹವಾಲಿನಲ್ಲಿ ಬರುವ ಸಮಸ್ಯೆಗಳಿಗೆ ತಕ್ಷಣವೇ ಪರಹಾರ ಕಂಡುಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಡಿ.ಸಿ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆನ್ ಲೈನ್ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.
ಕಲಬುರಗಿಯ ಅಗ್ರೋ ಫುಡ್ ಪಾರ್ಕ್ ಎಂ.ಡಿ. ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರು ಜೇವರ್ಗಿಯ ಫುಡ್ ಪಾರ್ಕ್ ನಲ್ಲಿ 2016ರಲ್ಲಿ ನಿವೇಶನ ಖರೀದಿಸಲಾಗಿದೆ, ಅದಕ್ಕೆ ಬೇಕಾದ ಪೂರ್ಣ ಹಣ ಪಾವತಿಸಿದೆ. ಇದುವರೆಗೆ ನಿವೇಶನ ತಮ್ಮ ಹೆಸರಿಗೆ ನೋಂದಣಿ ಆಗಿಲ್ಲ ಎಂದು ಜನಸ್ಪಂದನದಲ್ಲಿ ಸಿ.ಎಂ ಬಳಿ ಅಳಲು ತೋಡಿಕೊಂಡರು. ವಿಡಿಯೋ ಸಂವಾದದಲ್ಲಿ ಕಲಬುರಗಿಯಿಂದ ಹಾಜರಿದ್ದ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಕೂಡಲೇ ನಿವೇಶನ ನೊಂದಣಿ ಮಾಡಿಸುವಂತೆ ಸಿ.ಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದ ಮಮತಾ ಎನ್ನುವವರು ತಾವು ಬಿ.ಎಫ್.ಟಿ, ಕಾಯಕ ಮಿತ್ರಾ ಹುದ್ದೆಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದು, ತಾಲೂಕ ಪಂಚಾಯತ್ ಇ.ಓ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರು ತಮ್ಮ ಅರ್ಜಿ ಪರಿಗಣಿಸುತ್ತಿಲ್ಲ. ದಯವಿಟ್ಟು ಉದ್ಯೋಗ ನೀಡಬೇಕೆಂದು ಸಿ.ಎಂ. ಅವರಿಗೆ ಮನವಿ ಮಾಡಿಕೊಂಡಿದ್ದು, ಸೂಕ್ತವಾಗಿ ಪರಿಶೀಲಿಸುವಂತೆ ಸಿ.ಎಂ ಕಚೇರಿಯಿಂದ ಅರ್ಜಿ ಕಲಬುರಗಿಗೆ ರವಾನಿಸಲಾಗಿದೆ.
ಕುರುಬರಿಗೆ ಪೂಜಾ ಮಾಡಲು ಅವಕಾಶ ಕೊಡಿ.
ಇನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಕಲಬುರಗಿ ತಾಲೂಕಿನ ಮೇಳಕುಂದಾ(ಬಿ) ಗ್ರಾಮದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸರ್ವೆ ನಂ.114ರಲ್ಲಿ 30 ಎಕರೆ ಪ್ರದೇಶದಲ್ಲಿ ಶ್ರೀ ಮಾಳಿಂಗರಾಯ ದೇವಸ್ಥಾನ ಇದ್ದು, ತಲೆ ತಲಾಂತರದಿಂದ ಕುರುಬ ಸಮುದಾಯದವರು ದೇವಸ್ಥಾನದ ಪೂಜೆ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅನ್ಯ ಸಮುದಾಯದವರು ಇದನ್ನು ಅಕ್ರಮಿಸಿಕೊಂಡು ಕುರುಬ ಸಮುದಾಯದ ಪೂಜಾರಿಗಳ ಮೇಲೆ ಹಲ್ಲೆ ಮಾಡಿದ್ದು, ಇದನ್ನು ನಿಯಂತ್ರಿಸಿ ಕುರುಬ ಸಮುದಾಯದವರಿಗೆ ಮೊದಲಿನಂತೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಶ್ರೀ ಮಾಳಿಂಗರಾಯ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಮುತ್ಯಾ ಅವರು ಸಿ.ಎಂ. ಬಳಿ ಮನವಿ ಮಾಡಿದರು. ಈ ಸಂಬಂಧ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿ.ಎಂ ಕಚೇರಿಯಿಂದ ಡಿ.ಸಿ. ಅವರಿಗೆ ನಿರ್ದೇಶನ ನೀಡಲಾಯಿತು.
ಒತ್ತುವರಿ, ರಸ್ತೆ ನಿರ್ಮಾಣ, ಗೃಹ ಲಕ್ಣ್ಮೀ ಯೋಜನೆಯಡಿ ಹಣ ಬಂದಿಲ್ಲ, ಪಡಿತರ ಸಮಸ್ಯೆ, ವರ್ಗವಾದರೂ ಇನ್ನು ಬಿಡುಗಡೆ ಮಾಡಿಲ್ಲ ಹೀಗೆ ಅನೇಕ ಸಮಸ್ಯೆಗಳು ಅಹವಾಲಿನಲ್ಲಿ ಕೇಳಿಬಂದವು. ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ಅರ್ಜಿದಾರರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಆಯಾ ಜಿಲ್ಲೆಯ ಡಿ.ಸಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು. ಮಧ್ಯಾಹ್ಮ 1 ಗಂಟೆ ಸುಮಾರಿಗೆ ವಿವಿಧ ಇಲಾಖೆವಾರು ಸುಮಾರು 1,147 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ತಕ್ಷಣವೇ 20 ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಯಿತು.
Key words: Janatadarshan- CM Siddaramaiah- instructs - register - businessmen's- Site