For the best experience, open
https://m.justkannada.in
on your mobile browser.

ಕನ್ನಡ, ನಾಡು, ನುಡಿ ಜಲದ ಬಗ್ಗೆ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತೆ- ಸಚಿವ ಶಿವರಾಜ್ ತಂಗಡಗಿ.

06:06 PM Jan 02, 2024 IST | prashanth
ಕನ್ನಡ  ನಾಡು  ನುಡಿ ಜಲದ ಬಗ್ಗೆ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತೆ  ಸಚಿವ ಶಿವರಾಜ್ ತಂಗಡಗಿ

ಮೈಸೂರು,ಜನವರಿ,2,2024(www.justkannada.in):  ಕನ್ನಡಪರ ಹೋರಾಟಗಾರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಕನ್ನಡ ನಾಡು ನುಡಿ ಜಲದ ಬಗ್ಗೆ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ  ಸಚಿವ ಶಿವರಾಜ್ ತಂಗಡಗಿ, ಕನ್ನಡ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಸರ್ಕಾರ ಈಗಾಗಲೇ 60:40 ರ ಕನ್ನಡ ಬಳಕೆಗೆ ನಿರ್ದೇಶನ‌ ನೀಡಿದೆ. ಅದನ್ನ ಪಾಲನೆ ಮಾಡಬೇಕು. ಕಾನೂನಿನ ಮುಂದೆ ನಾವು ನೀವು ಎಲ್ಲರೂ ಒಂದೆ ಎಂದರು.

ಕಲ್ಲಡ್ಕ ಪ್ರಭಾಕರ್ ಮೇಲಿಂದ ಇಳಿದು ಬಂದಿಲ್ಲ ಅವರ ಮೇಲೂ ಕ್ರಮ.

ಮುಸ್ಲಿಂ ಸಮುದಾಯದ ಮಹಿಳೆಯರ  ಬಗ್ಗೆ ಕಲ್ಲಡ್ಕ ಪ್ರಭಾಕರ್ ಅವಹೇಳನ ಹೇಳಿಕ ವಿಚಾರ ಕುರಿತು ಪ್ರಕರಣ ದಾಖಲಾಗಿದ್ದರೂ ಅವರನ್ನ ಬಂಧಿಸದ ಕುರಿತು ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಕಲ್ಲಡ್ಕ ಪ್ರಭಾಕರ್ ಮೇಲಿಂದ ಇಳಿದು ಬಂದಿಲ್ಲ ಅವರ ಮೇಲೂ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಮಾನ್ಯ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರನ್ನೂ ಪೋಷಣೆ, ರಕ್ಷಣೆ ಮಾಡುವ ಮಾತೇ ಇಲ್ಲ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ರಾಜಕೀಯವಾಗಿ ಮುಗಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಅದು ನೂರಕ್ಕೆ ನೂರು ಸತ್ಯ.  ಸಿಬಿಐ, ಇಡಿ ಸಂಸ್ಥೆಗಳನ್ನು ಬಿಜೆಪಿಯವರ ಸ್ವಂತ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಕಾನೂನಾತ್ಮಕವಾಗಿ ವಾಪಸ್ ಪಡೆದಿದ್ದರೂ ಮತ್ತೇ ಎದುರಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಮೂಲಕ ಬಿಜೆಪಿ ಪಕ್ಷದ ವಿರುದ್ಧ ಟೀಕೆ ಮಾಡುವವರ ಬಗ್ಗೆ, ಪ್ರಭಾವಿಗಳ ಬಗ್ಗೆ ದ್ವೇಷದ ರಾಜಕೀಯ ಮಾಡುತ್ತಿದೆ. ಅಂತವರನ್ನ ಟಾರ್ಗೆಟ್ ಮಾಡಿ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಯವರ ಮೇಲೆ ಯಾಕೆ ಇಡಿ, ಸಿಬಿಐ ಕೇಸ್ ಗಳನ್ನು ಹಾಕುತ್ತಿಲ್ಲ. ಭ್ರಷ್ಟಾಚಾರ, ಸುಳ್ಳು ಹೇಳೋದೆ ಬಿಜೆಪಿ ಅಜೆಂಡಾ. ಜನರ ಧಾರ್ಮಿಕ ಭಾವನೆಗಳ ಮೇಲೆ ಆಟ ಆಡ್ತಾರೆ. ಭಾವನಾತ್ಮಕ ವಿಚಾರ ಜನರ ಮೇಲೆ ಹೇರಿ ಜನರನ್ನ ದಿಕ್ಕು ತಪ್ಪಿಸುವುದೇ ಬಿಜೆಪಿ ಅಜೆಂಡಾ. ಅವರಿಗೆ ಅಭಿವೃದ್ಧಿ ಮೇಲೆ ಚಿಂತನೆ ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ  ಹರಿಹಾಯ್ದರು.

ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಮುಚ್ಚುವ ಪ್ರಶ್ನೆ ಇಲ್ಲ.

ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆ ಇಲ್ಲ. ಈಗಾಗಲೇ ಕೇರಳಾಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.

ಇನ್ನು ರಂಗಾಯಣ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ಸದ್ಯಕ್ಕೆ ನಾನೇ ಅದರ ನಿರ್ದೇಶಕ, ಅಧ್ಯಕ್ಷ ಎಲ್ಲಾ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

Key words: Kannada- always - support   - Minister -Shivaraj Thangadagi.

Tags :

.