HomeBreaking NewsLatest NewsPoliticsSportsCrimeCinema

ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಕ್ರಮ- ಸಚಿವ ಶಿವರಾಜ ತಂಗಡಗಿ.

07:23 PM Jul 25, 2024 IST | mahesh

 

ಬೆಂಗಳೂರು, ಜು,25,2024: (www.justkannada.in news) ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಮಲೆಯಾಳಿ ಭಾಷೆಗಳ ಬಾಂಧವ್ಯ ಬೆಸೆಯಲು ಕೇರಳ ಗಡಿ ಭಾಗದಲ್ಲಿ ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಕ್ರಮಕೈಗೊಳ್ಳಲಾಗುವುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಕಾಸಸೌಧದಲ್ಲಿ ಆಯೋಜಿಸಿದ್ದ ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕನ್ನಡ ಮತ್ತು ಮಲೆಯಾಳಿ ಭಾಷೆಗಳ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳದ ಮಹಾತ್ಮರೆನಿಸಿದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಕರ್ನಾಟಕ ಸರ್ಕಾರ ಆಚರಿಸುತ್ತಿದೆ. ಅನೇಕ ಮಲೆಯಾಳಿ ಸಾಹಿತ್ಯ ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿವೆ. ನಾರಾಯಣ ಗುರುಗಳ ಸಾಹಿತ್ಯವನ್ನು ಸಹ ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ ಪ್ರಕಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಭಾಷೆ-ಭಾಷೆಗಳ ನಡುವೆ ಜಗಳ ಆಗುವುದು ಸರಿಯಲ್ಲ. ಎಲ್ಲಾ ಭಾಷಿಕರು ಸೌಹಾರ್ದದಿಂದ ಬದುಕುವುದು ಕಲಿಯಬೇಕು ಎಂದರು.

ಸಮಾರಂಭ ಉದ್ಘಾಟಿಸಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಬೇಕು. ಇದರ ಮೂಲಕ ಮಲೆಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷಾ ಪ್ರೇಮದ ಜೊತೆಗೆ ಸಾಹಿತ್ಯದ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ ಎಂದರು.

ಇಂದು ಇಡೀ ವಿಶ್ವ ಒಂದು ಹಳ್ಳಿಯಂತಾಗಿದೆ. ನೀವು ಎಷ್ಟು ಹೆಚ್ಚು ಭಾಷೆಗಳನ್ನು ಕಲಿಯುತ್ತೀರೋ ಅಷ್ಟು ಆತ್ಮ ವಿಶ್ವಾಸ ಹೆಚ್ಚುತ್ತದೆ. ಕೇರಳದಲ್ಲಿ ಮಲೆಯಾಳಿ ಭಾಷೆಯನ್ನು ಪ್ರೀತಿಸುವಷ್ಟೆ, ಕರ್ನಾಟಕದಲ್ಲಿ ಕನ್ನಡವನ್ನು ಪ್ರೀತಿಸಿ, ಕನ್ನಡ ಕಲಿಯುವ ಮೂಲಕ ಸೌಹಾರ್ದತೆಯನ್ನು ಬೆಳೆಸಿ ಎಂದರು.

ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ-ಮಲೆಯಾಳಂ ಲೇಖಕ  ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಹಾಗೂ ಸಂಚಾಲಕರಾದ ಟಾಮಿ ಜೆ ಅಲುಂಕಲ್ ಅವರು ಹಾಜರಿದ್ದರು.

key words: Steps will be taken, to organise, Kannada-Malayalam, Sahitya Sammelana, Minister Shivaraj Thangadagi

Tags :
Kannada-MalayalamMinister Shivaraj ThangadagiSahitya SammelanaSteps will be takento organise
Next Article