HomeBreaking NewsLatest NewsPoliticsSportsCrimeCinema

ಫೆಬ್ರವರಿ 1 ರಿಂದ ಇ-ಕಚೇರಿಯಲ್ಲಿ ಮಾತ್ರ ಅರ್ಜಿ ಸ್ವೀಕಾರ : ಸಚಿವ‌ ಕೃಷ್ಣ ಬೈರೇಗೌಡ

08:33 PM Jan 24, 2024 IST | mahesh

 

ಕಲಬುರಗಿ,ಜ.24 :   ಆಡಳಿತದಲ್ಲಿ ಪಾರದರ್ಶಕತೆ ತರಲು ಇ-ಆಫೀಸ್ ಅನುಷ್ಟಾನಗೊಳಿಸಿದೆ. ಫೆಬ್ರವರಿ 1 ರಿಂದ ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಯಲ್ಲಿ ಇ-ಕಚೇರಿ ಮೂಲಕವೇ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸ್ವೀಕೃತಿ ಸಂಖ್ಯೆ ನೀಡಬೇಕು. ಯಾವುದೇ ಕಾರಣಕ್ಕೂ ಭೌತಿಕ ಕಡತ ಪ್ರಕ್ರಿಯೆ ಇರಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲ್ಲದೆ ಫೆ.1 ರಿಂದ ಆವಕ ಸಿಬ್ಬಂದಿಗೆ ಸ್ಟ್ಯಾಂಪ್, ಸೀಲು ಸಹ ನೀಡಬಾರದು ಎಂದರು.

ಜಿಲ್ಲೆಯ ಶಹಾಬಾದ, ಯಡ್ರಾಮಿ, ಕಾಳಗಿ ತಹಶೀಲ್ದಾರ ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇ-ಕಚೇರಿ ಅನುಷ್ಟಾನ ಮಾಡದಿರುವುದಕ್ಕೆ ಸಿಡಿಮಿಡಿಗೊಂಡ ಅವರು, ಪಾರದರ್ಶಕ, ಸಮಯ ಉಳಿತಾಯ, ಅಕೌಂಟೇಬಿಲಿಟಿ ಇರಲೆಂದೇ ನೂತನ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಂಡು ಕಡ್ಡಾಯವಾಗಿ ಅನುಷ್ಠನಾಗೊಳಿಸಬೇಕು ಎಂದು ತಹಶೀಲ್ದಾರ, ಕಂದಾಯ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.

ಯಡ್ರಾಮಿ ತಹಶೀಲ್ದಾರ ಕಚೇರಿಯಲ್ಲಿ ಕಳೆದ‌ 6 ತಿಂಗಳಲ್ಲಿ ಕೇವಲ 42 ಕಡತ ಸೃಜಿಸಿದ್ದು, ಇ-ಆಫೀಸ್ ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ತಹಶೀಲ್ದಾರರಿಗೆ ನೋಟಿಸ್ ನೀಡುವಂತೆ ಡಿ.ಸಿ.ಗೆ ನಿರ್ದೇಶನ‌ ನೀಡಿದ ಸಚಿವರು, ಜನವರಿ ಅಂತ್ಯಕ್ಕೆ ಎಲ್ಲಾ ತಹಶೀಲ್ದಾರ ಕಚೇರಿಯಲ್ಲಿ ಇ-ಕಚೇರಿಯಲ್ಲಿ ಸೃಜಿಸಿದ ಕಡತ ಪರಿಶೀಲಿಸಬೇಕು. ಶೇ.75 ರಷ್ಟು ಅರ್ಜಿಗಳು ಇ-ಕಚೇರಿಯಲ್ಲಿ ಇನ್ ವಾರ್ಡ್ ಮಾಡದಿದ್ದಲ್ಲಿ ಅಂತಹವರಿಗೆ ನೋಟಿಸ್ ಜಾರಿಗೊಳಿಸಿ ಎಂದರು.

ಕೆಸ್ವಾನ್ ಸಂಪರ್ಕ ಇಲ್ಲ, ಸರ್ವರ್ ಇಲ್ಲ ಎಂಬ ಕುಂಟು ನೆಪ ಬೇಡ. ನಾನು ಅದೆ‌ ಸರ್ವರ್ ಮೂಲಕವೇ ಕಡತ ವಿಲೇವಾರಿ‌ ಮಾಡುತ್ತಿದ್ದೇನೆ. ಡಿ.ಸಿ. ಕಚೇರಿಯಿಂದ ಕಂದಾಯ ಆಯುಕ್ತರಿಗೆ ಕಡತ ಕಳುಹಿಸಿದಲ್ಲಿ 2-3 ದಿನದಲ್ಲಿ ಸೂಕ್ತ ಆದೇಶದ ಜೊತೆಗೆ ವಿಲೇವಾರಿ ಮಾಡಲಾಗುತ್ತಿದೆ. ಅಷ್ಟೊಂದು ತ್ವರಿತಗತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಕಡತ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಹಳೇ ಫೈಲ್ ಪದ್ದತಿ ವಿಲೇವಾರಿಯಿಂದ ಹೊರ‌ಬನ್ನಿ. ತಂತ್ರಜ್ಞಾನ ಸಮರ್ಪಕವಾಗಿ ಬಳಸಬೇಕು‌ ಎಂದು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಜಿಲ್ಲೆಯಲ್ಲಿ ಇ-ಆಫೀಸ್ ಅನುಷ್ಟಾನ ಏಕೆ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಸಮಸ್ಯೆ ಇದ್ದರೆ ಹೇಳಿ, ಐ.ಟಿ-ಬಿ.ಟಿ‌ ಸಚಿನಾಗಿರುವುದರಿಂದ ನಮ್ಮ ಇಲಾಖೆಯಿಂದ‌ ಸಮಸ್ಯೆ ಬಗೆಹರಿಸಬಹುದಾದರೆ ಪ್ರಯತ್ನಿಸುವೆ ಎಂದ‌ ಅವರು, ಸಾರ್ವಜನಿಕರು ಕಚೇರಿಗೆ ಅಲಿಯಬೇಕು, ತಮ್ಮನ್ನು ಬಂದು ಕಾಣಬೇಕು ಎಂಬ ಹಳೇ ಪದ್ದತಿಯಿಂದ ಹೊರಬನ್ನಿ ಎಂದರು.

 

ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಮೇಲೆ ನಿಗಾ ಇಡಿ:

ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಇದ್ದಿದ್ದು, 50 ಲಕ್ಷ‌ ಎಕರೆ. ಸಾಗುವಳಿ ಚೀಟಿಗೆ ಅರ್ಜಿ ಬಂದಿರೋದು 54 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ. ಸಾಗುವಳಿ ಅಲ್ಲದವರು ಅರ್ಜಿ ಹಾಕಿದ್ದಾರೆ. ಸೂಕ್ತವಾಗಿ ಪರಿಶೀಲಿಸಿ ರೆಸೋಲುಷನ್ ಪಾಸ್ ಮಾಡಿ ಸಾಗುವಳಿ ಚೀಟಿ ವಿತರಿಸಬೇಕು. ಇನ್ನು ಮುಂದೆ ಸಾಗುವಳಿ ‌ಚೀಟಿ ಜೊತೆಗೆ ಪೋಡಿ ಸ್ಕೆಚ್ ನೀಡುವ ಚಿಂತನೆ ನಡೆದಿದೆ. ಮುಮದೆ ಅನ್ ಲೈನ್ ಮೂಲಕವೇ ಸಾಗುವಳಿ ಚೀಟಿ ನೀಡಲಾಗುವುದು ಎಂದರು.

ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಕಂದಾಯ ಇಲಾಖೆಯ ಆಯುಕ್ತ ಸುನೀಲ ಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ತಹಶೀಲ್ದಾರರು, ಸಬ್ ರಿಜಿಸ್ಟ್ರಾರ್, ಇತರೆ ಅಧಿಕಾರಿಗಳು ಇದ್ದರು.

Key words : Karnataka ̲ krishnabyregowda _ online ̲ form

Tags :
Karnataka̧ krishnabyregowda̧ online ̧ form
Next Article