For the best experience, open
https://m.justkannada.in
on your mobile browser.

ಅನೀಮಿಯಾ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ :  ದಿನೇಶ್ ಗುಂಡೂರಾವ್

03:53 PM Jun 19, 2024 IST | mahesh
ಅನೀಮಿಯಾ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ    ದಿನೇಶ್ ಗುಂಡೂರಾವ್

ಮೈಸೂರು.ಜೂ.19,2024; ಆರೋಗ್ಯ ಸೇವೆಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವುದು ಹಾಗೂ ರಾಜ್ಯವನ್ನು ಅನೀಮಿಯಾ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್  ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಹಯೋಗದಲ್ಲಿ ರೂಪಿಸಿರುವ ಪ್ರಾಜೆಕ್ಟ್ ಚಂದನ ಯೋಜನೆಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2 ವರ್ಷ ಅವಧಿಗೆ ಜಾರಿಗೊಳಿಸಲಾಗುತ್ತಿದೆ. ಸಿಕಲ್ ಸೆಲ್ ಅನಿಮಿಯಾ ರೋಗದ ಪತ್ತೆ, ಜಾಗೃತಿ ಹಾಗೂ ಚಿಕಿತ್ಸೆ ನೀಡುವುದು ಗುರಿಯಾಗಿದ್ಧು ಸರಳವಾಗಿ ಸಿಕಲ್ ಸೆಲ್ ಅನಿಮಿಯಾ ಕಂಡು ಹಿಡಿಯುವ ಸಾಧನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ಈ ಸಾದನಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂದರು.

7 ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆ ಮಾಡಿದ್ದು ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬoದಿದೆ. ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ಕಾಯಿಲೆ ಆಗಿದ್ದು, ಸಿಕಲ್ ಸೆಲ್ ಅನೀಮಿಯಾ ಇರುವವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರಾಜೆಕ್ಟ್ ಚಂದನ ಯೋಜನೆಯಡಿ ಮುಂದಿನ 2 ವರ್ಷಗಳಲ್ಲಿ 2.56 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿ ಸಿಕಲ್ ಸೆಲ್ ಅನೀಮಿಯಾ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಆರೋಗ್ಯ ಇಲಾಖೆಯ ಸೇವೆಗಳನ್ನು ಉತ್ತಮ ಪಡಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಬಡ ಜನರಿಗೆ ಸಕಾಲದಲ್ಲಿ ದೊರೆಯುವಂತೆ ಮಾಡಲಾಗುವುದು ಎಂದರು.

ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮಾತನಾಡಿ ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬoದಿದೆ. ಇದನ್ನು ನಿರ್ಮೂಲನೆ ಮಾಡಲು ಹೆಚ್ಚಾಗಿ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ನನ್ನ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ  ಮಾತನಾಡಿ ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಸಿಕಲ್ ಸೆಲ್ ಅನೀಮಿಯಾ ಕಂಡುಬರುತ್ತಿದೆ. ಅರಣ್ಯ ಪ್ರದೇಶದ ಹಾಡಿಗಳಲ್ಲಿ ವಾಸಿಸುತ್ತಿರುವರಲ್ಲಿ ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಾಗಿ ಕಂಡುಬರುತ್ತದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಜನರು ಮದುವೆ ಆಗುವಾಗ ಜೆನೆಟಿಕ್ಸ್ ಟೆಸ್ಟ್ ಮಾಡಿಸಿ ಮದುವೆ ಆಗುವುದು ಉತ್ತಮ. ಸಿಕಲ್ ಸೆಲ್ ಅನೀಮಿಯಾ ಇರುವವರು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಎಂದರು.

ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ  ಮಾತನಾಡಿ, ಮೈಸೂರು ಜಿಲ್ಲಾ ಆಸ್ಪತ್ರೆ ಉತ್ತಮ ಮಟ್ಟದ ಚಿಕಿತ್ಸೆ ನೀಡುತ್ತಿದೆ. ಒಂದು ವರ್ಷದ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾಸಿಕ 30 ರಿಂದ 40 ಹೆರಿಗೆಗಳು ಆಗುತ್ತಿದ್ದವು. ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದರಿಂದ ಇಂದು ಮಾಸಿಕ 250 ರವರೆಗೆ ಹೆರಿಗೆಗಳು ಆಗುತ್ತಿವೆ. ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಿ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಂಟುoಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯತ್ರಿ, ಯುವ ವಿಜ್ಞಾನಿ ಸಾಯಿ ಶಿವ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Key words: Our aim, is to make, Karnataka, anemia-free, Dinesh Gundu Rao

Tags :

.