ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ CWMA ಸೂಚನೆ.
ನವದೆಹಲಿ, ಮೇ, 21, 2024 (www.justkannada.in): ಕಳೆದ ಬಾರಿ ಸರಿಯಾಗಿ ಮಳೆಯಾಗದೇ ರಾಜ್ಯದಲ್ಲಿ ಬರ ಆವರಿಸಿದ್ದು ಇದೀಗ ಪೂರ್ವಮುಂಗಾರು ಸ್ವಲ್ಪ ಚುರುಕುಗೊಂಡಿದೆ. ಈ ಮಧ್ಯೆಯೇ ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿ ಶಾಕ್ ಕೊಟ್ಟಿದೆ.
ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ನೀರು ಹರಿಸಲು ನಿರ್ದೇಶನ ನೀಡಿದೆ. ಇಂದು ನಡೆದ ಸಭೆಯಲ್ಲಿ ತಮಿಳುನಾಡಿಗೆ 2.5 ಟಿಎಂಸಿ ನೀರು ಬಿಡುವಂತೆ ಸಿಡಬ್ಲ್ಯುಎಂಎ ಕರ್ನಾಟಕಕಕ್ಕೆ ನಿರ್ದೇಶನ ನೀಡಿದೆ. ಸಭೆಯಲ್ಲಿ ವಾದ ಮಂಡಿಸಿರುವ ತಮಿಳುನಾಡು ಅಧಿಕಾರಿಗಳು, ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಕರ್ನಾಟಕದ ಅಗತ್ಯತೆಗಳಿಗೆ ಸದ್ಯ 4 ಟಿಎಂಸಿ ನೀರು ಸಾಕು. ಮುಖ್ಯ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದೆ. ಹೀಗಾಗಿ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಬೇಕು. ನೀರು ಬಿಡಲು ಅವರಿಗೆ ಯಾವುದೇ ತೊಂದರೆ ಇಲ್ಲ. ಈ ವರ್ಷ ಸಾಕಷ್ಟು ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯಕ್ಕೆ ಆರು ಟಿಎಂಸಿ ನೀರನ್ನು ತಕ್ಷಣವೇ ಬಿಡಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿಗೆ ನಮ್ಮಲ್ಲಿ ನೀರು ಸಾಕಾಗುತ್ತಿಲ್ಲ: ಕರ್ನಾಟಕದ ವಾದ
ಸಭೆಯಲ್ಲಿ ವಾದ ಮಂಡಿಸಿದ ಕರ್ನಾಟಕದ ಅಧಿಕಾರಿಗಳು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಲಾಶಯಗಳಲ್ಲಿ ನೀರಿಲ್ಲದೆ ಬರಿದಾಗಿದ್ದು, ಕುಡಿಯುವ ನೀರಿಗೆ ನಮ್ಮಲ್ಲಿನ ನೀರು ಸಾಕಾಗುತ್ತಿಲ್ಲ. ಇರುವ ನೀರನ್ನು ಸಂಪೂರ್ಣ ಬಳಸಿಕೊಳ್ಳಲು ಆಗಲ್ಲ. ಮಾನ್ಸೂನ್ ಸಾಮಾನ್ಯವಾಗಿದ್ದರೆ ಮಾತ್ರ ನೀರು ಬಿಡಬಹುದು. ಇಲ್ಲದಿದ್ದರೆ ನೀರು ಬಿಡುವುದಕ್ಕೆ ಸಾಧ್ಯವೆ ಇಲ್ಲ ಎಂದು ಹೇಳಿದ್ದಾರೆ.
Key words: Karnataka, CWMA, Tamil Nadu, water