For the best experience, open
https://m.justkannada.in
on your mobile browser.

ಬಜೆಟ್ ಬಗ್ಗೆ ಮೊದಲು ತಿಳಿಯಿರಿ, ನಂತರ ಮಾತನಾಡಿ- ಆರ್.ಅಶೋಕ್, ಬಿವೈ ವಿಜಯೇಂದ್ರಗೆ ಎಂ.ಲಕ್ಷ್ಮಣ್ ತಿರುಗೇಟು.

05:59 PM Feb 16, 2024 IST | prashanth
ಬಜೆಟ್ ಬಗ್ಗೆ ಮೊದಲು ತಿಳಿಯಿರಿ  ನಂತರ ಮಾತನಾಡಿ  ಆರ್ ಅಶೋಕ್  ಬಿವೈ ವಿಜಯೇಂದ್ರಗೆ ಎಂ ಲಕ್ಷ್ಮಣ್ ತಿರುಗೇಟು

ಮೈಸೂರು,ಫೆಬ್ರವರಿ,16,2024(www.justkannada.in): ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಟೀಕಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ರಾಜ್ಯ ಸರ್ಕಾರದ ಬಜೆಟ್ ಕುರಿತು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸರ್ವಜನಾಂಗದ ಅಭಿವೃದ್ಧಿ ಪರ ಬಜೆಟ್ ಎಂದು ಹೇಳಬಹುದು. ಬಿ.ವೈ ವಿಜಯೇಂದ್ರಗೆ ಬಜೆಟ್ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ? ವಿಪಕ್ಷ ನಾಯಕ ಅಶೋಕ್ ರಾಜ್ಯದ ಬಜೆಟ್ ಬಗ್ಗೆ ನಿಮಗೆ ಅರಿವಿಲ್ಲ. ಬಜೆಟ್ ಬಗ್ಗೆ ಮೊದಲು ತಿಳಿಯಿರಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಎಂದು ಚಾಟಿ ಬೀಸಿದರು.

ನಿರ್ಮಲಾ ಸೀತಾರಾಮನ್ ಕೇವಲ 50 ನಿಮಿಷದಲ್ಲಿ ಮುಗಿಸಿದಂತೆ ಅಂದ್ಕೊಂಡ್ರಾ ? ಯಾರೋ ಪ್ರಿಪೇರ್ ಮಾಡಿರುವ ಬಜೆಟ್ ಪೇಪರ್ ಅಲ್ಲ ಸ್ವಾಮಿ ಇದು. ಸ್ವತಃ ಸಿದ್ದರಾಮಯ್ಯ ಅವರೇ ನಿಂತು ಪ್ರತಿ ಒಂದು ಬಜೆಟ್ ಪುಟಗಳನ್ನು ಕುರಿತು ಮಂಡಿಸಿದ್ದಾರೆ. ಮೈಸೂರು ಭಾಗಕ್ಕೆ ಅನುದಾನ ನೀಡಿರುವ ಬಗ್ಗೆ ಹೇಳುವುದಾದರೆ ಕೆ.ಆರ್.ಎಸ್ ಬೃಂದಾವನವನ್ನು ಡಿಸ್ನಿಲ್ಯಾಂಡ್ ಮಾದರಿ ರೂಪುಗೊಳಿಸಲು ಮುಂದಾಗಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ. ಮೈಸೂರು ಮಹಾರಾಣಿ  ವಿಜ್ಞಾನ ಕಾಲೇಜಿನ ಅಭಿವೃದ್ಧಿ, ಇನ್ನು ಮಹಾನಗರ ಪಾಲಿಕೆ ವಿಚಾರದಲ್ಲಿ ಮೂಲ ಸೌಕರ್ಯಕ್ಕೆ 250 ಕೋಟಿ ಅನುದಾನ. ಹೀಗೆ ಅನೇಕ ಅನುದಾನಗಳನ್ನು ಈ ಬಜೆಟ್‌ ನಲ್ಲಿ ನೀಡಿದ್ದಾರೆ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.

ಬಾಂಡ್ ಗಳ ಬಗ್ಗೆ ಐತಿಹಾಸಿಕ ತೀರ್ಪು: ಬಿಜೆಪಿಗೆ ಸುಪ್ರೀಂಕೋರ್ಟ್ ಮೇಲೆ ಕೋಪ ಬಂದಿರುವಂತಿದೆ..

ಸುಪ್ರೀಂ ಕೋರ್ಟ್ ಚುನಾವಣೆ ಬಾಂಡ್ ಗಳ ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ಇದು 2018ರಲ್ಲಿ ಪ್ರಧಾನಿ ಮೋದಿ ತಂದ ಕಾನೂನು. ಬಾಂಡ್ ಮುಖಾಂತರ ಮಾಹಿತಿ ಗೌಪ್ಯವಾಗಿಟ್ಟು ಸಾವಿರಾರು ಕೋಟಿ ಪಕ್ಷಕ್ಕೆ ದೇಣಿಗೆ ಪಡೆದಿದ್ದಾರೆ. ಈಗ ಆ ಎಲ್ಲಾ ಮಾಹಿತಿಯನ್ನ ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿದೆ. ಅದಾನಿ ಅಂಬಾನಿ ಸೇರಿ ಯಾರು ಎಷ್ಟೆಷ್ಟು ಬಿಜೆಪಿ ಪಕ್ಷಕ್ಕೆ ಕೊಟ್ಟಿದ್ದಾರೆ ಅನ್ನೋದು ಈಗ ಬಯಲಾಗುತ್ತೆ. ಕೇವಲ ಹತ್ತು ವರ್ಷದಲ್ಲಿ ಬಿಜೆಪಿ ಹತ್ತು ಸಾವಿರ ಕೋಟಿ ದೇಣಿಗೆ ಬಂದಿದೆ. ನಮಗೆ 1947ರಿಂದ ಇಲ್ಲಿಯ ತನಕ ಸಾವಿರ ಕೋಟಿ ದೇಣಿಗೆ ಬಂದಿದೆ ಅಷ್ಟೇ. ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ ಬಿಜೆಪಿಗೆ ಸುಪ್ರೀಂ ಕೋರ್ಟ್ ಮೇಲೆ ಕೋಪ ಬಂದಿರುವ ಹಾಗಿದೆ. ಆ ಕೋಪವನ್ನ ತೀರಿಸಿಕೊಳ್ಳಲು ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ.

ಕಾಂಗ್ರೆಸ್ ನ ಅಕೌಂಟ್ ಗಳನ್ನೆಲ್ಲ ಐಟಿ ಇಲಾಖೆ ಸೀಜ್ ಮಾಡಿದೆ. ಇದಕ್ಕೆ ನಿಖರವಾದ ಕಾರಣ ಕೊಟ್ಟಿಲ್ಲ. ಬಿಜೆಪಿಯವರು ಆಧಿಕಾರಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ. 2014 ಮತ್ತು 2019ರಲ್ಲಿ ಜನ ಮೂರ್ಖರಾದರು.  ಆದರೆ ಅದು ಈಗ ಮರುಕಳಿಸಲ್ಲ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಶ್ವಥ್ ನಾರಾಯಣ್ ಉಸ್ತುವಾರಿಯಾಗಿದ್ದಾರೆ. ಮೈಸೂರಿಗೆ ಕಾಲಿಡುವ ಮುನ್ನ ತಾಯಿ ಚಾಮುಂಡಿಯನ್ನು ನೆನೆಸಿಕೊಂಡು ಕಾಲಿಡಿ. ನೀವು ಜನರಿಗೆ ಏನನ್ನು ಬೇಕಾದರು ಹೇಳಬಹುದು. ನಾವು ಹೇಳಲಿಕ್ಕೆ ಮುಂದಾದರೆ ನಮ್ಮ ಬಾಯಿ ಹೊಲಿಯುವ ಕೆಲಸ ಮಾಡುತ್ತೀರಾ ಎಂದು  ಎಂ ಲಕ್ಷ್ಮಣ್ ಲೇವಡಿ ಮಾಡಿದರು.

ಅಶ್ವಥ್ ನಾರಾಯಣ್ ಅವರಿಗೆ ನಾಲ್ವಡಿ ಯಾರು ಗೊತ್ತಾ ?

ಪ್ರತಾಪ್ ಸಿಂಹ ನಾಲ್ವಡಿ ರೀತಿ  ಕೆಲಸ ಮಾಡಿದ್ದಾರೆ ಎಂದಿದ್ದ ಅಶ್ವಥ್ ನಾರಾಯಣ್  ವಿರುದ್ದ ಗರಂ ಆದ ಎಂ.ಲಕ್ಷ್ಮಣ್ , ಶಾಸಕ ಅಶ್ವಥ್ ನಾರಾಯಣ್ ಅವರಿಗೆ ನಾಲ್ವಡಿ ಯಾರು ಗೊತ್ತಾ ? ಎಂದು ಪ್ರಶ್ನಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ನಿಮಗೇನು ತಿಳಿದಿದೆ ? ಅವರು ಕೊಟ್ಟ ಕೊಡುಗೆಗಳು ಮತ್ತು ಅಭಿವೃದ್ಧಿ ವಿಚಾರಗಳನ್ನ ಪ್ರತಾಪ್ ಸಿಂಹಗೆ ಹೋಲಿಸುತ್ತಾರಾ? ಬಿಜೆಪಿ ಅವರು ಸುಳ್ಳು ಹೇಳುವಲ್ಲಿ ನಿಸ್ಸೀಮರು. ಸುಳ್ಳೇ ನಿಮ್ಮ ಮನೆ ದೇವರು ಎಂದು ನಿಮ್ಮ ಮಾತಿನಿಂದ ತಿಳಿಯುತ್ತದೆ. ಅಶ್ವಥ್ ನಾರಾಯಣ್ ಸುಳ್ಳು ಹೇಳುವುದರಲ್ಲಿ 3ನೇ ಸ್ಥಾನದಲ್ಲಿದ್ದರು. ಈ ಹೇಳಿಕೆ ಮೂಲಕ ಎರಡನೇ ಸ್ಥಾನಕ್ಕೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Know -budget –first- talk -later- R. Ashok-BY Vijayendra- M. Laxman

Tags :

.