For the best experience, open
https://m.justkannada.in
on your mobile browser.

KRS ಡ್ಯಾಂ ಸುಭದ್ರ, ಆತಂಕದ ಅವಶ್ಯಕತೆ ಇಲ್ಲ- ಸಚಿವ ಎನ್ ಚಲುವರಾಯಸ್ವಾಮಿ

06:19 PM Aug 13, 2024 IST | prashanth
krs ಡ್ಯಾಂ ಸುಭದ್ರ  ಆತಂಕದ ಅವಶ್ಯಕತೆ ಇಲ್ಲ  ಸಚಿವ ಎನ್ ಚಲುವರಾಯಸ್ವಾಮಿ

ಮಂಡ್ಯ,ಆಗಸ್ಟ್,13,2024 (www.justkannada.in): ಕೃಷ್ಣರಾಜ ಸಾಗರ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಇಂದು ಕಾವೇರಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆ ನಡೆಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ಜಿಲ್ಲೆಯಲ್ಲಿ 948 ಕೆರೆಗಳಿದ್ದು, ಕೆರೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಗಳಿಗೆ ನೀರಿನ ತೊಂದರೆ ಇಲ್ಲ. ತಾಂತ್ರಿಕಾ ತೊಂದರೆಗಳಿಂದ ಕೆಲವು ಭಾಗಗಳಿಗೆ ಕೃಷಿಗೆ ನೀರು ತಲುಪಿಲ್ಲ ತಡವಾಗಿ ನೀರು ತಲುಪುತ್ತದೆ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡ ಬೇಕು. ಇಲ್ಲಾವಾದಲ್ಲಿ ರೈತರಿಂದ ಹಲವಾರು ದೂರು ಬರುತ್ತದೆ ಎಂದರು.

ಕಾವೇರಿ ಅಚ್ಚುಕಟ್ಟಿನಲ್ಲಿ ಹೆಚ್ಚಾಗಿ ಮಳೆಯಾಗಿದೆ. ಕೃಷಿ ಹಾಗೂ ಕೆರೆಗಳಿಗೆ ನೀರು ನೀಡಬೇಕು. ನೀರು ಹರಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ತಿಳಿಸಬೇಕು. ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗದಲ್ಲಿರುವ ಕೆರೆಗಳನ್ನು ಸಹ ತುಂಬಿಸಲು ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿ ಎಂದರು.

ಶೇ 100 ರಷ್ಟು ಸಾಧನೆಯಾಗಬೇಕು 2024- 25 ನೇ ಸಾಲಿನಲ್ಲಿ ಇಲಾಖೆಗಳಿಗೆ ಸರ್ಕಾರ ನಿಗಧಿಪಡಿಸಿರುವ ಗುರಿ ಶೇ 100 ರಷ್ಟು ಸಾಧನೆ ಮಾಡಬೇಕು ಡಿಸೆಂಬರ್ ಅಂತ್ಯದೊಳಗೆ ಶೇ 70 ರಿಂದ 80 ಸಾಧನೆ ಮಾಡಿದರೆ ಶೇ 100 ರಷ್ಟು ಸಾಧನೆ ಮಾಡಬಹುದು ಎಂದರು.

2023-24 ನೇ ಸಾಲಿಗೆ ಸಂಬಂಧಿಸಿದಂತೆ ಯಾವುದಾದರೂ ಕಾಮಗಾರಿ ಪ್ರಾರಂಭ ಬಾಕಿಯಿದ್ದಲ್ಲಿ ಸೆಪ್ಟೆಂಬರ್ ಮಾಹೆಯೊಳಗೆ ಪ್ರಾರಂಭವಾಗಬೇಕು‌ ಯಾವುದಾದರೂ ತೊಂದರೆ ಇದ್ದಲ್ಲಿ ಗಮನಕ್ಕೆ ತನ್ನಿ ಎಂದರು.

ರೈತರಿಗೆ ಕಾಲಕ್ಕೆ ಸರಿಯಾಗಿ ಬಿತ್ತನೆ ಬೀಜ, ಕೀಟಾನಾಶಕ ರಸಗೊಬ್ಬರಗಳ ಬಳಕೆ, ಅಳವಡಿಸಿಕೊಳ್ಳಬೇಕಿರುವ ತಾಂತ್ರಿಕತೆ, ತಳಿಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿ ಎಂದರು.

ರೈತರ ಆತ್ಮಹತ್ಯೆಯ ಪ್ರಕರಣಗಳಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಕೆಲಸದಲ್ಲಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸಿ ಅವರಿಗೆ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ರೈತರ ಮನೆಯವರನ್ನು ಅಲೆದಾಡಿಸಬಾರದು ಎಂದರು.

ಫಲಿತಾಂಶ ಉತ್ತಮಗೊಳಿಸಿ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮಗೊಳಿಸಬೇಕು‌ ಎರಡರಿಂದ ಮೂರನೇ ಸ್ಥಾನಕ್ಕೆ ತರಬೇಕು. ಈಗಲೇ ಯೋಜನೆ ರೂಪಿಸಿ, ಅಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದರು.

ಬಾಲ್ಯವಿವಾಹ ತಡೆಗಟ್ಟಲು ಜಾಗೃತಿ ಮೂಡಿಸಿ ಬಾಲ್ಯ ವಿವಾಹವಾದ ನಂತರ‌ ಶಿಕ್ಷೆ ವಿಧಿಸುವುದು ಸರಿಯಷ್ಠೆ. ಬಾಲ್ಯವಿವಾಹಕ್ಕಿಂತ ಮೊದಲೇ ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ. ಸಾರ್ವಜನಿಕರಲ್ಲಿ ಬಾಲ್ಯ ವಿವಾಹವಾದ ಬಗ್ಗೆ ಕಾನೂನು ಭಯ ಹುಟ್ಟಿಸಿ‌ ಇದರ ಜೊತೆಗೆ ಬಾಲ್ಯವಿವಾಹವಾದ ಹೆಣ್ಣು ಮಗುವಿನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಎಂದರು.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಕೇವಲ ಆರೋಗ್ಯ ಇಲಾಖೆಯ ಕೆಲಸ ಎಂಬ ಧೋರಣೆ ಬೇಡ. ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಟ್ಟಾಗಿ ಕೆಲಸ ನಿರ್ವಹಿಸಿ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ತಡೆಗಟ್ಟಿ ಎಂದರು.

ವಿಧಾನಸಭಾ ಶಾಸಕರು, ವಿಧಾನ ಪರಿಷತ್ ಶಾಸಕರಿಗೆ ಕ್ಷೇತ್ರ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನ ಸಂಪೂರ್ಣವಾಗಿ ವೆಚ್ಚವಾಗಬೇಕು. ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಬೇಕು ಇದಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಸಂಬಂಧಿಸಿದ ಶಾಸಕರನ್ನು ಭೇಟಿ ಮಾಡಿ ಯಾವುದಾದರೂ ಬದಲಾವಣೆ ಬೇಕಿದ್ದಲ್ಲಿ ಮಾಡಿಕೊಂಡು ಕೆಲಸ ಪ್ರಾರಂಭಕ್ಕೆ ಕ್ರಮವಹಿಸಬೇಕು ಎಂದರು.

ಜಮೀನಿಗೆ ಆಧಾರ್ ಸೀಡಿಂಗ್ ಮಾಡುವ ಕೆಲಸಕ್ಕೆ ಅಂತಿಮ ದಿನಾಂಕವನ್ನು ನಿಗದಿಮಾಡಿ ಕೆಲಸವನ್ನು ಚುರುಕುಗೊಳಿಸಿ. ಮಾಲೀಕರ ಆಧಾರ್ ಕಾರ್ಡ್ ಸೀಡಿಂಗ್ ಕೆಲಸ ಮಾಡಿ ಯಾವುದೇ ತಪ್ಪುಗಳು ನಡೆಯದಂತೆ ನೋಡಿಕೊಳ್ಳಿ ಶ್ರೀರಂಗಪಟ್ಟಣ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ  ಅವರು ತಿಳಿಸಿದರು.

ಕೆ.ಆರ್.ಎಸ್ ಜಲಾಶಯದ ಸುತ್ತ ಅನಧಿಕೃತ ರೆಸಾರ್ಟ್ ಗಳು ಹೆಚ್ಚಾಗುತ್ತಿದೆ. ಕೆಲವು ಕುಡಿಯುವ ನೀರಿನ ಮೂಲಗಳಿಗೆ ಕಾರ್ಖಾನೆಗಳಿಂದ ಕಲುಷಿತ ನೀರು ಮಿಶ್ರಣವಾಗುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ ಎಸ್.ಎಸ್ ಎಲ್ ಸಿ ಪರೀಕ್ಷೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಬಾರಿ 8 ರಿಂದ 10 ಶಾಲೆಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಡಿಮೆ ಅಂಕ ಪಡೆಯುವ ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 2011 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಗಂಡು ಮಕ್ಕಳು1000 :  ಹೆಣ್ಣು ಮಕ್ಕಳು 935 ಇತ್ತು. ಈ ಪರಿಪಾತದ ಅಂತರ ಕಡಿಮೆಯಾಗುತ್ತಿದ್ದು,  ಗಂಡು ಮಕ್ಕಳು1000 :  ಹೆಣ್ಣು ಮಕ್ಕಳು 865 ಇದೆ. ಇದು ಸೋಚನೀಯ ವಿಷಯವಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕಿದೆ ಎಂದರು.

ಸಿ‌ಎಸ್ಆರ್ ಯೋಜನೆಯಡಿ ಜಿಲ್ಲೆಯ ಆಯ್ದ ಪಿ.ಹೆಚ್.ಸಿ ಗಳಿಗೆ ಇ.ಸಿ.ಜಿ ಯಂತ್ರಗಳನ್ನು ನೀಡಲಾಗಿತ್ತು, ಸುಮಾರು 6000 ಜನರಿಗೆ ತಪಾಸಣೆ ನಡೆಸಲಾಗಿದ್ದು, ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿರುವ ಹಿನ್ನಲೆಯಲ್ಲಿ ಇನ್ನೂ 11 ಪಿ‌ಹಚ್ ಸಿಗಳಿಗೆ ಇ.ಸಿ‌.ಜಿ ಯಂತ್ರಗಳನ್ನು ವಿತರಿಸಲಾಯಿತು.

ಕೃಷಿ ಇಲಾಖೆಯಿಂದ ಹೊರ ತರಲಾಗಿರುವ ಭತ್ತದ ಬೆಳೆ ಉತ್ಪದನೆ ಹೆಚ್ಚಿಸಲು ರೈತರು ಅನುಸರಿಬೇಕಿರುವ ತಾಂತ್ರಿಕತೆಗಳ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ವಿಧಾನಸಭಾ ಶಾಸಕ ಹೆಚ್.ಟಿ ಮಂಜು,  ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಎಂ‌.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಮುಡಾ ಅಧ್ಯಕ್ಷ ನಯೀಮ್,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬು ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: KRS Dam, safe, Minister, Chaluvarayaswamy

Tags :

.