ನಾಲೆಗಳಿಗೆ ನೀರು ಬಿಡದಿದ್ರೆ ನಾನೇ ಬಂದು ಅಣೆಕಟ್ಟೆ ಗೇಟ್ ಗಳನ್ನು ಎತ್ತುತ್ತೇನೆ - ಕೇಂದ್ರ ಸಚಿವ ಹೆಚ್ ಡಿಕೆ ಎಚ್ಚರಿಕೆ
ಮಂಡ್ಯ,ಸೆಪ್ಟಂಬರ್,13,2024 (www.justkannada.in): ಮಳವಳ್ಳಿ, ನಾಗಮಂಗಲ ಸೇರಿ ವಿವಿಧ ಭಾಗಗಳ ಕೆರೆ ತುಂಬಿಸದಿದ್ದರೆ, ಕೊನೆಯ ಭಾಗದ ಪ್ರದೇಶಗಳ ನಾಲೆಗೆ ನೀರು ಹರಿಸದಿದ್ದರೆ ನಾನೇ ಬಂದು ಕೃಷ್ಣರಾಜ ಸಾಗರ ಸಾಗರದ ಗೇಟ್ ಗಳನ್ನು ಎತ್ತಿ ನೀರು ಬಿಡಬೇಕಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಗಲಭೆಪೀಡಿತ ನಾಗಮಂಗಲಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ , ಮಳವಳ್ಳಿ ಭಾಗಕ್ಕೆ ಇದುವರೆಗೂ ನೀರು ಕೊಟ್ಟಿಲ್ಲ. ಕುಮಾರಸ್ವಾಮಿಗೆ ವೋಟು ಹಾಕಿದ್ದೀರಿ, ನೀರು ಬೇಕಾದರೆ ಕುಮಾರಸ್ವಾಮಿಯನ್ನೇ ಹೋಗಿ ಕೇಳಿ ಎಂದು ಒಬ್ಬ ಶಾಸಕ ಹೇಳುತ್ತಿದ್ದಾನೆ. ಅಣೆಕಟ್ಟೆ ಇವರ ಅಪ್ಪನ ಮನೆಯ ಆಸ್ತಿಯೇ. ರೈತರಿಗೆ ನೀರು ಕೊಡಲು ಯೋಗ್ಯತೆ ಇಲ್ಲ. ಜಲಪಾತೋತ್ಸವ ಬೇರೆ ಮಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಕಿಡಿಕಾರಿದರು.
ಕೆರೆಕಟ್ಟೆಗಳಲ್ಲಿ ನೀರು ಇಲ್ಲ. ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದೆ. ನನ್ನನ್ನು ಭೇಟಿಯಾಗಿದ್ದ ತಮಿಳುನಾಡಿನ ಕೆಲ ನಾಯಕರು ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ ಎಂದು ಹೇಳುತ್ತಾರೆ. ನಮ್ಮಲ್ಲಿ ಮಳೆ ಇಲ್ಲದೆ ಕೆರೆಗಳು ತುಂಬಿಲ್ಲ. ಮೊದಲೇ ತುಂಬಿಸುವ ಕೆಲಸ ಮಾಡಬೇಕಿತ್ತು ಎಂದು ಹೆಚ್.ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸಂಜೆಯೇ ನಾನು ದೆಹಲಿಯಿಂದ ಬರುವಾಗ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಆರ್.ಎಲ್.ವೆಂಕಟೇಶ್ ಜತೆ ಮಾತನಾಡಿದ್ದೇನೆ. ಅವರಿಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇನೆ. ತಕ್ಷಣ ನಾಲೆಗೆ ನೀರು ಹರಿಸಿ, ಇಲ್ಲವಾದರೆ ಜನರ ಜತೆ ಬಂದು ನಾನೇ ಅಣೆಕಟ್ಟೆಯ ಗೇಟ್ ಗಳನ್ನು ಎತ್ತಿ ನೀರು ಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದೇನೆ. ತಕ್ಷಣ ಅವರು ನೀರು ಹರಿಸದಿದ್ದರೆ ನಾನೇ ರಸ್ತೆಗೆ ಇಳಿಯುತ್ತೇನೆ, ಹೇಳಿದ್ದನ್ನು ಮಾಡಿ ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ಕೊಟ್ಟರು.
Key words: KRS Dam, water, HDK, warning