ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲರೂ ಕನ್ನಡಿಗರಾಗಬೇಕು- ಸಿಎಂ ಸಿದ್ದರಾಮಯ್ಯ ನುಡಿ
ಮೈಸೂರು,ಸೆಪ್ಟಂಬರ್,20,2024 (www.justkannada.in): ಕರ್ನಾಟಕದಲ್ಲಿ ಯಾರೆಲ್ಲ ವಾಸ ಮಾಡುತ್ತಾರೋ ಅವರೆಲ್ಲರೂ ಕನ್ನಡಿಗರಾಗಬೇಕು. ಕನ್ನಡ ಭಾಷೆ ಮಾತನಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಜಂಟಿಯಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ "ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ" ವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಸಾಹಿತಿಯಲ್ಲ, ಆದರೂ ನನನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದರು. ಈಗ ಅದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗಿದೆ. ಅಂದಿನಿಂದ ಕನ್ನಡದಲ್ಲೇ ಬರೆಯಲು ಶುರುಮಾಡಿದೆ. ಈಗ ಇಂಗ್ಲೀಷ್ ಮರೆತು ಹೋಗಿದೆ. ಇಂಗ್ಲೀಷ್ ನಲ್ಲಿ ಪತ್ರ ಇದ್ರೇ ನಾನು ಇಂಗ್ಲೀಷ್ ನಲ್ಲಿ ಸಹಿ ಮಾಡುತ್ತೇನೆ. ಕನ್ನಡದಲ್ಲಿ ಪತ್ರ ಇದ್ದರೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಯಾವನೋ ಒಬ್ಬ ಇದಕ್ಕೆ ದೂರು ಕೊಟ್ಟಿದ್ದಾನೆ. ಸಿದ್ದರಾಮಯ್ಯ ಕನ್ನಡದಲ್ಲೇ ಸಹಿ ಮಾಡುವುದು, ಆದ್ರೆ ಇಂಗ್ಲೀಷ್ ನಲ್ಲಿ ಸಹಿ ಇದೆ ಎಂದು ದೂರು ಕೊಟ್ಟಿದ್ದಾರೆ. ಇವರೆಲ್ಲ ಎಂತಹ ಪೆದ್ದರಿದ್ದಾರೆ. ಇದಕ್ಕೆ ರಾಜ್ಯಪಾಲರು ಯಾಕೆ ತನಿಖೆ ಮಾಡಬಾರದು ಅಂತ ನೋಟಿಸ್ ಕೊಟ್ಟಿದ್ದಾರೆಂದು ಸಿದ್ದರಾಮಯ್ಯ ತಿಳಿಸಿದರು.
ಕನ್ನಡಿಗರಿಗೆ ಸ್ವಲ್ಪ ಉದಾರತೆ ಜಾಸ್ತಿ. ಯಾರು ಯಾವ ಭಾಷೆ ಮಾತನಾಡುತ್ತಾರೋ ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನ ಮಾಡುತ್ತಾರೆ. ಇದರಿಂದ ಕರ್ನಾಟಕದಲ್ಲಿ ಯಾವ ಭಾಷೆಯಲ್ಲಿ ಮಾತನಾಡಿದರೂ ಬದುಕಬಹುದು ಎಂದುಕೊಂಡಿದ್ದಾರೆ. ನಾವು ಬೇರೆ ಭಾಷೆಯ ವಿರೋಧಿಗಳಲ್ಲ. ಆದರೆ ನಾವು ಕನ್ನಡ ಮಾತನಾಡುವುದನ್ನು ಬಿಡಬಾರದು. ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಾಣ ಮಾಡಬೇಕು. ಪಕ್ಕದ ರಾಜ್ಯದವರಿಗೆ ದುರಾಭಿಮಾನ ಇರಬಹುದು. ತಮಿಳುನಾಡಿಗೆ ಹೋದರೆ ತಮಿಳು, ಕೇರಳದಲ್ಲಿ ಮಲಯಾಳಂ, ಆಂಧ್ರಕ್ಕೆ ಹೋದರೆ ತೆಲುಗಿನಲ್ಲಿ ಉತ್ತರಿಸುತ್ತಾರೆ. ಇಂಗ್ಲೀಷ್ ಗೊತ್ತಿದ್ದರೂ ಅವರು ಮಾತನಾಡುವುದಿಲ್ಲ. ಆದರೆ ನಾವು ಕನ್ನಡಿಗರು ಮಾತ್ರ, ಅವರ ಭಾಷೆಯಲ್ಲೇ ಮಾತನಾಡುವ ಪ್ರಯತ್ನ ಮಾಡುತ್ತೇವೆ. ನಾವು ಹುಟ್ಟಿದ ಮೇಲೆ ಸಮಾಜಕ್ಕೆ ಒಳಿತು ಮಾಡಬೇಕು. ನಾವು ಹುಟ್ಟಿದ ಮೇಲೆ ಹೇಗೆ ಬದುಕಿದೆವು ಎಂದು ಚಿಂತಿಸಬೇಕು. ಈಗ ಮನುಷ್ಯ ಮನುಷ್ಯನನ್ನು ದ್ವೇಷ ಮಾಡುತ್ತಾನೆ. ಇದು ನಮ್ಮ ಸಂಸ್ಕೃತಿಯಲ್ಲ. ಅದನ್ನು ಬಿಟ್ಟು ಧರ್ಮದ ಜಾತಿಯ ಹೆಸರಿನಲ್ಲಿ ಸಂಸ್ಕೃತಿ ನಾಶ ಆಗುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು. ನಾವು ವಿದ್ಯಾವಂತರು, ಮನಷ್ಯರನ್ನ ಪ್ರೀತಿಸುವುದನ್ನು ಕಲಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: living, Karnataka, should,become,Kannadiga, CM Siddaramaiah